ನೋಯ್ಡಾ: ಆನ್ಲೈನ್ ಗೇಮಿಂಗ್ PUBG ಮೂಲಕ ಪರಿಚಯವಾಗಿ ಪಾಕಿಸ್ತಾನದಿಂದ ಭಾರತಕ್ಕೆ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ನುಸುಳಿರುವ ಸೀಮಾ ಹೈದರ್ ಸುತ್ತ ಇದೀಗ ಅನುಮಾನದ ಹುತ್ತ ದಟ್ಟವಾಗಿ ಬೆಳೆದಿದೆ. ರಾಷ್ಟ್ರರಾಜಧಾನಿ ದೆಹಲಿಗೆ ಹೊಂದಿಕೊಂಡಿರುವ ಗ್ರೇಟರ್ ನೋಯ್ಡಾದ ರಬುಪುರದ ಸಚಿನ್ ಎಂಬ ವ್ಯಕ್ತಿಯ ಪ್ರೇಮದಲ್ಲಿ ಬಿದ್ದ ಸೀಮಾ ಹೈದರ್ ಇದೀಗ ತನಿಖಾ ಸಂಸ್ಥೆಗಳ ರಾಡಾರ್‌ನಲ್ಲಿದ್ದಾರೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪದಲ್ಲಿ ಬಂಧಿತರಾಗಿರುವ ಸೀಮಾ ಹೈದರ್ ಈಗ ಹಲವು ಏಜೆನ್ಸಿಗಳ ವಿಚಾರಣೆಯನ್ನು ಎದುರಿಸಿದ್ದಾರೆ.
ವಾಸ್ತವವಾಗಿ ಸೀಮಾದ ಮಾತನಾಡುವ ಭಾಷೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ಹಿಂದಿ ಭಾಷೆಯಲ್ಲಿ ಅವರಿಗೆ ಉತ್ತಮ ಹಿಡಿತವಿದೆ. ಮೂಲತಃ ಪಾಕಿಸ್ತಾನದ ಬಲೂಚಿಸ್ತಾನದವರಾದ ಸೀಮಾ ಅವರು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ ಮತ್ತು ಅವರ ಮಾತೃಭಾಷೆ ಬಲೂಚ್ ಆಗಿದ್ದರೂ ಸಹ ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಸೀಮಾ ಹೈದರ್ ತನ್ನ ಮನೆ ಸಿಂಧ್ ಪ್ರಾಂತ್ಯದಲ್ಲಿದೆ ಮತ್ತು ಹೆಚ್ಚು ಶಿಕ್ಷಣ ಪಡೆದಿಲ್ಲ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಆಕೆ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಉತ್ತರ ನೀಡುತ್ತಿರುವ ರೀತಿ ತನಿಖಾ ಸಂಸ್ಥೆಗಳ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.
ಕೇವಲ 5ನೇ ತರಗತಿ ಕಲಿತ್ತಿದ್ದೇನೆ ಎನ್ನುವ ಸೀಮಾ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು, ಕಂಪ್ಯೂಟರ್ ಕಾರ್ಯಾಚರಣೆಯ ಬಗ್ಗೆ ಉತ್ತಮ ಜ್ಞಾನ ಹೊಂದಿರುವುದು, ಐದು ಪಾಸ್‌ಪೋರ್ಟ್‌ಗಳು, ಆಧಾರ್ ಕಾರ್ಡುಗಳು, ಮೂರು ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಪತ್ತೆಯಾಗಿರುವುದು, ಸಹೋದರ ಪಾಕಿಸ್ತಾನ ಸೇನೆಯಲ್ಲಿರುವುದು ಇವೆಲ್ಲಾ ಈಕೆಯ ಭಾರತ ನುಸುಳುವಿಕೆಯ ಬಗ್ಗೆ ಅನುಮಾನ ಹುಟ್ಟುಹಾಕಿದೆ.
ತನಿಖಾ ಸಂಸ್ಥೆಗಳು ಸೀಮಾ ಅವರ ಮೊಬೈಲ್ ಫೋನ್‌ನ ಸಂಪೂರ್ಣ ತನಿಖೆ ನಡೆಸುತ್ತಿವೆ ಮತ್ತು ಆಕೆಯ ವಿಳಾಸ ಮತ್ತು ಇಡೀ ಕುಟುಂಬದ ಮಾಹಿತಿಯನ್ನು ಸಹ ಸಂಗ್ರಹಿಸುತ್ತಿವೆ. ಇದರೊಂದಿಗೆ ಆಕೆಯ ಹಾಗೂ ನಾಲ್ವರು ಮಕ್ಕಳ ಪಾಸ್‌ಪೋರ್ಟ್‌ಗಳನ್ನು ಕೂಡಾ ಪರಿಶೀಲಿಸಲಾಗುತ್ತಿದೆ.