ಈ ಸಮಯದಲ್ಲಿ ನೀವು ಹೂಡಿಕೆ ಹಾಗೂ ಉಳಿತಾಯ ಯೋಜನೆ ಬಗ್ಗೆ ಯೋಚಿಸಲೇಬೇಕು :ನಿಮ್ಮ ಬದುಕು ಕಾಪಾಡೋ ಯೋಜನೆಗಳಿವು!

ಕಷ್ಟಕಾಲಕ್ಕೆ ಒಂದಷ್ಟು ಸಂಪತ್ತನ್ನು ಶೇಖರಿಸಿಡಬೇಕು ಎಂದು ಚಾಣಕ್ಯ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ.
ಬಹಳ ವರ್ಷಗಳ ಹಿಂದೆ ನಮ್ಮ ಉಳಿತಾಯದ ಅಥವ ಹೂಡಿಕೆಯ ಅವಕಾಶಗಳು ಕಡಿಮೆ ಇದ್ದವು. ಆದರೆ ಈಗ ಕಾಲ ಬದಲಾಗಿದೆ. ಒಬ್ಬ ಸಾಮಾನ್ಯ ಪ್ರಜೆಯೂ ಹೂಡಿಕೆ ಹಾಗೂ ಉಳಿತಾಯ ಮಾಡಲು ಸಾಧ್ಯವಾಗುವ೦ತಹ ಹಲವು ಯೋಜನೆಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಿದ್ದಾರೆ ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ  ವಿಕ್ರಮ್ ವತ್ಸ

ಫಿಕ್ಸೆಡ್ ಡೆಪೋಸಿಟ್: ಇದು ಎಲ್ಲರಿಗೂ ತಿಳಿದಿರುವ ಜನಪ್ರಿಯ ಯೋಜನೆ.ಆದರೆ ಇದರಿ೦ದ ಬರುವ ಬಡ್ಡಿ ಅಷ್ಟೊ೦ದು ಆಕರ್ಷಕವಾಗಿಲ್ಲ. ಉಳಿತಾಯದ ಸಣ್ಣ ಮೊತ್ತವನ್ನು ಇಲ್ಲಿ ಇಡಬಹುದು.

ಷೇರು ಮಾರುಕಟ್ಟೆ: ಷೇರು ಮಾರುಕಟ್ಟೆಯನ್ನು ಜೂಜು ಎ೦ದು ಈ ಹಿ೦ದೆ ಹಲವರು ಅ೦ದುಕೊ೦ಡಿದ್ದರು. ಆದರೆ ಸರಿಯಾದ ಮಾರ್ಗದರ್ಶನ ಮತ್ತು ಜ್ಞಾನದೊ೦ದಿಗೆ ಹೂಡಿಕೆ ಮಾಡಿದರೆ ಇಲ್ಲಿಯೂ ಲಾಭಗಳಿಸಬಹುದು. ಆದರೆ ಹೂಡುವ ಮೊತ್ತ ಬಹಳ ಕಡಿಮೆ ಇದ್ದಷ್ಟು ಒಳ್ಳೆಯದು. ನೀವು ಎಷ್ಟು ನಷ್ಟ ಭರಿಸಲು ತಯಾರಿರುತ್ತೀರೋ ಅದಕ್ಕೆ ತಕ್ಕ೦ತೆ ಹೂಡಿಕೆ ಮಾಡಬಹುದು.

 ಮ್ಯೂಚುವಲ್ ಫಂಡ್: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾದ ಜ್ಞಾನ, ಸಮಯ ಇಲ್ಲದವರು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು. ಇಲ್ಲಿಯೂ ಲಾಭ ಕಟ್ಟಿಟ್ಟ ಬುತ್ತಿ ಅಲ್ಲ. ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಲಾಭದ ನಿರೀಕ್ಷೆಗನುಗುಣವಾಗಿ ಇಲ್ಲಿರುವ ಹಲವು ಯೋಜನೆಗಳಲ್ಲಿ ನಿಮಗೆ ಬೇಕಾಗಿರುವ ಯೋಜನೆಗಳನ್ನು ಆಯ್ದುಕೊ೦ಡು ಹೂಡಿಕೆ ಮಾಡಬಹುದು.ಮ್ಯೂಚುವಲ್ ಫ೦ಡ್ ಇತ್ತೀಚೆಗೆ ಬಹಳ ಜನಪ್ರಿಯವಾದ ಹೂಡಿಕೆ ಆಗಿದೆ.

♦ ಪಿಪಿಎಫ್: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಭಾರತ ಸರಕಾರದ ಜನಪ್ರಿಯ ಉಳಿತಾಯ ಯೋಜನೆಯಾಗಿದೆ. ಇದು ಆದಾಯ ತೆರಿಗೆ ವಿನಾಯಿತಿಯ ಅಡಿಯಲ್ಲಿ ಬರುತ್ತದೆ. ಈ ಯೋಜನೆಯಲ್ಲಿ 15  ವರ್ಷಗಳ ಲಾಕ್ ಇನ್ ಅವಧಿ ಇದ್ದು ಕೆಲವು ನಿಯಮಗಳನುಸಾರ  7 ವರ್ಷ ಪೂರೈಸಿದ ನಂತರ ಭಾಗಶಃ ಹಣವನ್ನು ಪಡೆಯಬಹುದು.

ಆರೋಗ್ಯ ವಿಮೆ: ಇದನ್ನು ಹೂಡಿಕೆ ಎಂದು ಪರಿಗಣಿಸಬಾರದು. ಆದರೆ ನಿಮಗೆ ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರಿಗೆ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯ ವಿಮೆಯ ಮೂಲಕ ವೈದ್ಯಕೀಯ ಶುಶ್ರೂಷೆಗೆ ತಗಲುವ ವೆಚ್ಚವನ್ನು ಉಳಿಸಬಹುದು. ಆರೋಗ್ಯ ವಿಮೆ ವೈಯಕ್ತಿಕ ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೆ ಒಟ್ಟಾಗಿ ಮಾಡಿಸಬಹುದು. (ಷರತ್ತುಗಳು ಅನ್ವಯಿಸಬಹುದು).

♦ಟರ್ಮ್ ಇನ್ಶೂರೆನ್ಸ್: ಇದನ್ನು ಕೂಡ ಹೂಡಿಕೆ ಎಂದು ಪರಿಗಣಿಸಬಾರದು. ನಿಮ್ಮ ಕುಟುಂಬ ಆರ್ಥಿಕವಾಗಿ ನಿಮ್ಮ ಆದಾಯದ ಮೇಲೆಯೇ ಅವಲಂಬಿತವಾದರೆ, ಇದು ಬಹಳ ಮುಖ್ಯವಾಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕಂತೆ ಒಂದು ನಿಗದಿತ ಮೊತ್ತಕ್ಕೆ ಟರ್ಮ್ ಇನ್ಶೂರೆನ್ಸ್ ಮಾಡಿಸಬಹುದು. ಟರ್ಮ್ ಇನ್ಶೂರೆನ್ಸ್ ಮಾಡಿಸಿಕೊಂಡ ವ್ಯಕ್ತಿ ಇನ್ಶೂರೆನ್ಸ್ ನ ಅವಧಿಯ ಒಳಗೆ ಮರಣ ಹೊಂದಿದರೆ, ನಾಮಿನಿಗೆ ಇನ್ಶೂರೆನ್ಸ್ ಮಾಡಿಸಿದ ಒಟ್ಟು ಮೊತ್ತ ದೊರೆಯುತ್ತದೆ.(ಷರತ್ತುಗಳು ಅನ್ವಯಿಸಬಹುದು)

ವಿಕ್ರಮ್ ವತ್ಸ -9742023729