ಹಕ್ಕಿ ಹಬ್ಬದ ಮೂಲಕ ಸ್ಥಳೀಯ ಪಕ್ಷಿಗಳ ಪರಿಚಯ: ಬಿ.ಎಂ ಸುಕುಮಾರ ಶೆಟ್ಟಿ

ಉಡುಪಿ: ಕೊಲ್ಲೂರು ಅಭಯಾರಣ್ಯ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಹಲವು ಬಗೆಯ ಅಪರೂಪದ ಹಕ್ಕಿಗಳ ಬಗ್ಗೆ ಹಕ್ಕಿ ಹಬ್ಬದ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯ ಉತ್ತಮವಾದುದು ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಕೊಲ್ಲೂರಿನ ಹಲ್ಕಲ್‌ನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ನಡೆದ ಕರ್ನಾಟಕ ಹಕ್ಕಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಇಲಾಖೆಯ ಮೂಲಕ ಅರಣ್ಯದ ರಕ್ಷಣೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಈ ಭಾಗದಲ್ಲಿ ಶೇ.95 ರಷ್ಟು ಅರಣ್ಯ ಬೇಟೆ ಕಡಿಮೆಯಾಗಿದೆ. ಈ ಕಾಡಿನಲ್ಲಿ ಬುಡಕಟ್ಟು ಸಮುದಾಯದ ಜನತೆಗೆ ಅರಣ್ಯ ಇಲಾಖೆಯ ಕಾನೂನುಗಳ ಮೂಲಕ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಅರಣ್ಯ ಅಂಚಿನಲ್ಲಿನ ಗ್ರಾಮಸ್ಥರಿಗೆ ಇಲಾಖೆಯ ಮೂಲಕ ಅರಣ್ಯ ಹಾಗೂ ಪ್ರಾಣಿ ರಕ್ಷಣೆ ಮತ್ತು ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಕೊಲ್ಲೂರು ರಸ್ತೆಯಲ್ಲಿ ಕಾಡುಪ್ರಾಣಿಗಳು ಅಡ್ಡ ಬರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇದರ ತಡೆಗೆ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಫೆನ್ಸಿನ್ಗ್ ಅಳವಡಿಸುವಂತೆ ತಿಳಿಸಿದರು.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಮದನ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಇದು 9 ನೇ ಬಾರಿ ಹಕ್ಕಿ ಹಬ್ಬ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಭಾಗದಲ್ಲಿ ವಲಸೆ ಮತ್ತು ಸ್ಥಳೀಯ ಸುಮಾರು 300 ಕ್ಕೂ ಹೆಚ್ಚು ಹಕ್ಕಿಗಳಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಸಮುದಾಯದ ಬೆಂಬಲವಿಲ್ಲದೆ ಪಕ್ಷಿಗಳ ರಕ್ಷಣೆ ಸಾಧ್ಯವಿಲ್ಲ. ಈ ಬಾರಿಯ ಹಕ್ಕಿಹಬ್ಬದಲ್ಲಿ ಮಲಬಾರ್ ಟ್ರೋಗನ್ ರಾಯಭಾರಿ ಹಕ್ಕಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ರಾಜ್ಯ ಮತ್ತು ದೇಶದ ವಿವಿಧ ವನ್ಯಜೀವಿ ಛಾಯಾಗ್ರಾಹಕರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಡ್ಕಲ್ ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಎಸ್ ಶೆಟ್ಟಿ, ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಮ ಕೃಷ್ಣ ಭಟ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಪುಷ್ಕರ್, ಭದ್ರಾ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್, ಉಪ ಸಂರಕ್ಷಣಾಧಿಕಾರಿಗಳಾದ ಉದಯ ನಾಯಕ್, ದಿನೇಶ್, ಸತೀಶ್ ಬಾಬಾ ರೈ, ಶ್ರೀಪತಿ, ಸಿದ್ಧರಾಮಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಕಳ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಗಣಪತಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಮಲಬಾರ್ ಟ್ರೋಗನ್ ಪಕ್ಷಿಯ ವಿವರ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು.

ಜನವರಿ 8 ರ ವರೆಗೆ ನಡೆಯುವ ಈ ಹಕ್ಕಿ ಹಬ್ಬ ಕಾರ್ಯಕ್ರಮದಲ್ಲಿ ಸ್ಥಳೀಯ ಮತ್ತು ವಲಸೆ ಹಕ್ಕಿಗಳ ವೀಕ್ಷಣೆ, ವಿಚಾರಗೋಷ್ಠಿಗಳು
ನಡೆಯಲಿದೆ.