ಉಡುಪಿ: ಚೈಲ್ಡ್ ಲೈನ್-1098 ಉಡುಪಿ ವತಿಯಿಂದ ಹನುಮಂತನಗರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಂತರ್ಜಾಲ ಸುರಕ್ಷತೆ ಹಾಗೂ ಚೈಲ್ಡ್ ಲೈನ್-1098 ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿ ಕು.ನಯನರವರು ಚೈಲ್ಡ್ ಲೈನ್-1098ರ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸೆನ್ ಕ್ರೈಮ್ ಪೊಲೀಸ್ ಠಾಣೆ ಸಬ್ಇನ್ಸಪೆಕ್ಟರ್ ನಾರಾಯಣ್ ಇವರು ವಿದ್ಯಾರ್ಥಿಗಳಿಗೆ ಅಂತರ್ಜಾಲದ ಅತೀ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸಿದರು. ಮಕ್ಕಳು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯುವಂತೆ ಮತ್ತು ತಮ್ಮನ್ನು ತಾವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ವಿಷಯಗಳಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.
ಸೆನ್ ಕ್ರೈಮ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ ಮತ್ತು ಪ್ರವೀಣ್ ಇವರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಅಂತರ್ಜಾಲದಿಂದ ಯಾವೆಲ್ಲಾ ರೀತಿಯ ತೊಂದರೆಯಾಗುತ್ತದೆ ನ್ನುವುದನ್ನು ತಿಳಿಸಿದರು. ಮಕ್ಕಳಿಗೆ ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಚೈಲ್ಡ್ ಲೈನ್ 1098 ಅಥವಾ ಪೋಲಿಸರಿಗೆ ಕರೆ ಮಾಡಿ ಸಹಾಯ ಪಡೆಯಲು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸರಕಾರಿ ಪ್ರೌಢಶಾಲೆ ಇಂದಿರಾನಗರ ಇಲ್ಲಿನ ಮುಖ್ಯೋಪಾಧ್ಯಾಯೆ ಶ್ರೀಮತಿ ಮುಶ್ರತ್ ಜಹಾನ್ ಅಕ್ಬರ್, ಮಕ್ಕಳು ಅಪರಿಚಿತರ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ವೃಂದದವರು, ಚೈಲ್ಡ್ ಲೈನ್-1098 ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚೈಲ್ಡ್ ಲೈನ್-1098 ಉಡುಪಿಯ ಸಹನಿರ್ದೇಶಕ ಗುರುರಾಜ್ ಭಟ್ ಸ್ವಾಗತಿಸಿದರು. ಸಿಬ್ಬಂದಿ ಶ್ರೀಮತಿ ಅನುಷಾ ಕಾರ್ಯಕ್ರಮವನ್ನು ನಿರೂಪಿಸಿ, ಕೇಂದ್ರ ಸಂಯೋಜಕಿ ಕು. ಜ್ಯೋತಿ ವಂದಿಸಿದರು.