ಮಂಗಳೂರು: ಉತ್ತಮ ಏಕಾಗ್ರತೆಗಾಗಿ ವಿದ್ಯಾರ್ಥಿಗಳು ಯೋಗ ಮತ್ತು ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಕಾರಾತ್ಮಕ ಮನಸ್ಸಿನ ಆರೋಗ್ಯವಂತ ವ್ಯಕ್ತಿಯು ಸಮಾಜಕ್ಕೆ ಹೆಚ್ಚಿನಕೊಡುಗೆ ನೀಡಬಲ್ಲ. ಯೋಗ ಇಂದಿನ ಅಗತ್ಯಗಳಲ್ಲಿ ಒಂದು. ಆಧುನಿಕ ಜೀವನಶೈಲಿಯಿಂದಾಗಿ ಒತ್ತಡ, ಖಿನ್ನತೆ, ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತಿದ್ದುಇದಕ್ಕೆ ಅಷ್ಟಾಂಗ ಯೋಗಗಳು ಸಹಕಾರಿ. ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ.ಯೋಗ ಆರೋಗ್ಯವರ್ಧಕ ಹಾಗೂ ರೋಗ ನಿವಾರಕ ಎಂದು ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಯೋಗ ತೀರ್ಪುಗಾರ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹೇಳಿದರು.
ಅವರುಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಇಂದು ವಿಶ್ವದ ಎಲ್ಲ ಜನಾಂಗದವರು ಭಾರತದ ಸಂಸ್ಕೃತಿಯ ಉತ್ಕೃಷ್ಟ ಕಲೆಯಾದ ಯೋಗದ ಕಡೆ ಮುಖ ಮಾಡಿದ್ದಾರೆ. ಯೋಗವನ್ನು ಸರ್ವರೂ ಅಭ್ಯಾಸ ಮಾಡಿಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕು. ವಿದ್ಯಾರ್ಥಿಗಳು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸಾಧ್ಯ. ವಿಚಾರಗಳನ್ನು ಅಥವಾ ಚಿಂತನೆಗಳನ್ನು ಸುಲಭವಾಗಿ ತಿಳಿಯಲು ಸಹಕಾರಿಯಾಗುತ್ತದೆ. ಯೋಗ ನಮ್ಮ ಶರೀರ-ಮನಸ್ಸುಗಳಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ.ಯೋಗದ ಪ್ರತಿಯೊಂದು ಆಸನಗಳು ಬೇರೆ ಬೇರೆ ರೀತಿಯಲ್ಲಿ ಆರೋಗ್ಯಕ್ಕೆ ಸಹಕಾರಿ.ಆರೋಗ್ಯ ಪೂರ್ಣ ವ್ಯಕ್ತಿತ್ವಕ್ಕೆ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಆ ನಿಟ್ಟಿನಲ್ಲಿಎಕ್ಸ್ಪರ್ಟ್ ಪದವಿ ಪೂರ್ವಕಾಲೇಜು ವಿದ್ಯಾರ್ಜನೆಯ ಜೊತೆಗೆ ಪ್ರತಿನಿತ್ಯ ಯೋಗವನ್ನೂ ಅಭ್ಯಾಸ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ಶಿಷ್ಯವೃಂದದಿಂದ ಸಂಸ್ಥೆಯ ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿಗಳಿಗಾಗಿ ಹಲವು ಯೋಗ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್, ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ಶಿಷ್ಯ ವೃಂದದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಹಿಂದಿ ವಿಭಾಗದ ಮುಖ್ಯಸ್ಥ ಪ್ರಮೋದ್ ಕಿಣಿ ಸ್ವಾಗತಿಸಿ, ವಂದಿಸಿದರು.