ನಿಟ್ಟೆ ಸಮೂಹ ವಿದ್ಯಾಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ನಿಟ್ಟೆ: ದೈನಂದಿನ ಯೋಗಾಭ್ಯಾಸದಿಂದ ದೇಹಕ್ಕೆ ಉಲ್ಲಾಸ ಹಾಗೂ ಉತ್ತಮ ಆರೋಗ್ಯ ದೊರಕುತ್ತದೆ ಎಂಬ ವಿಚಾರ ವೈಜ್ಞಾನಿಕವಾಗಿ ವಿಶ್ವದಾದ್ಯಂತ ಅಂಗೀಕರಿಸಲ್ಪಟ್ಟ ವಿಷಯವಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್‌ ಎನ್‌ ಚಿಪ್ಳೂಣ್ಕರ್‌ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್, ನಿಟ್ಟೆ ಸಮೂಹ ವಿದ್ಯಾಸಂಸ್ಥೆ ಹಾಗೂ ವಿದ್ಯಾಥಿ೯ನಿಲಯದ ಸಹಯೋಗದಲ್ಲಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಯೋಗ ದಿನಾ‍ಚರಣೆ ಕಾರ್ಯಕ್ರಮ ಹಾಗೂ 21 ದಿನಗಳ ಯೋಗ ತರಬೇತಿ ಶಿಬಿರ ‘ಯೋಗ ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

8 ವರ್ಷಗಳ ಹಿಂದೆ ಜೂ. 21ನ್ನು ವಿಶ್ವಸಂಸ್ಥೆಯು ವಿಶ್ವ ಯೋಗದಿನವನ್ನಾಗಿ ಘೋ‍ಷಿಸಿದ ವಿಚಾರದಲ್ಲಿ ಭಾರತದ ಪಾತ್ರವನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಈ ಬಾರಿ ಕರ್ನಾಟಕದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಯೋಗ ದಿನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿರುವುದು ನಮಗೆ ಸಂತಸದ ವಿಷಯವಾಗಿದೆ ಎಂದರು.

ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್‌ನ ಮೈಂಟೆನೆನ್ಸ್‌ & ಡೆವಲ್ಮೆಂಟ್‌ ನಿದೇ೯ಶಕ ಯೋಗೀಶ್‌ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ, ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆಸಲಾದ 21 ದಿನಗಳ ಯೋಗ ತರಬೇತಿ ಶಿಬಿರವು ವಿದ್ಯಾಥಿ೯ಗಳಲ್ಲಿ ದೈಹಿಕ ಆರೋಗ್ಯ ಮಾನಸಿಕ ನೆಮ್ಮದಿ ಹಾಗೂ ಆಧ್ಯಾತ್ಮಿಕ ಅಂಶವನ್ನು ವೃದ್ಧಿಸುವ ಕೆಲಸ ಮಾಡಿದೆ. ಇಂದು ನಿಟ್ಟೆ ಕ್ಯಾಂಪಸ್‌ನಲ್ಲಿನ ವಿವಿಧ ವಿದ್ಯಾಸಂಸ್ಥೆಗಳು ಒಟ್ಟುಗೂಡಿಸಿಕೊಂಡು ಒಂದು ಉತ್ತಮ ರೀತಿಯ ವಿಶ್ವ ಯೋಗದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿ‍ಷಯ. ಈ ನಿಟ್ಟಿನಲ್ಲಿ ತಯಾರಿಗೆ ಶ್ರಮಿಸಿದ ಪ್ರತಿಯೋರ್ವರಿಗೂ ಶುಭಾಶಯ. ಇಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾದ ಯೋಗದಿನದ ಓರ್ವ ಸಂಘಟಕ ಕಾರ್ಕಳದವರು ಎನ್ನುವುದು ಸಂತಸದ ವಿಚಾರವಾಗಿದೆ. ಯೋಗವನ್ನು ಪ್ರತಿದಿನವೂ ಅಭ್ಯಾಸಿಸುವುದು ಅತಿಮುಖ್ಯ ಎಂದರು.

ಯೋಗ ಶಿಬಿರದ ಸಂಯೋಜಕ ಡಾ.ಅಜಿತ್‌ ಹೆಬ್ಬಾಳೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಐ ಆರ್ ಮಿತ್ತಂತಾಯ, ಡಾ.ಶ್ರೀನಿವಾಸ್ ರಾವ್ ಬಿ ಆರ್, ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಬಿ.ಕೆ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಕೆ, ಪಿ.ಯು ಕಾಲೇಜಿನ ಪ್ರಾಂಶುಪಾಲೆ ಭವಾನಿ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ರಾಧಾ ಪ್ರಭು, ಹುಡುಗರ ವಿದ್ಯಾಥಿ೯ನಿಲಯದ ಚೀಫ್ ವಾರ್ಡನ್ ಡಾ. ವಿಶ್ವನಾಥ ಹಾಗೂ ಯೋಗಗುರು ಡಾ.ಅಜಿತ್ ಹೆಬ್ಬಾಳೆ ಉಪಸ್ಥಿತರಿದ್ದರು.

ನಿಟ್ಟೆ ಕ್ಯಾಂಪಸ್ ನ ವಿದ್ಯಾರ್ಥಿ-ಸಿಬ್ಬಂದಿಗಳನ್ನು ಒಳಗೊಂಡಂತೆ ಒಟ್ಟು 854 ಮಂದಿ ಈ ಸಂದರ್ಭದಲ್ಲಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.

ನಿಟ್ಟೆ ಮಹಿಳಾ ವಿದ್ಯಾರ್ಥಿನಿಲಯದ ಚೀಫ್ ವಾರ್ಡನ್ ಡಾ.ವೀಣಾದೇವಿ ಶಾಸ್ತ್ರೀಮಠ್ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಯೋಗ ತಂಡವಾದ ಯುಜ್‌ ಫಾರ್‌ ಲೈಫ್‌ ನ ವಿದ್ಯಾಥಿ೯ ನಾಯಕಿ ಶ್ರೀವಾಣಿ ಬಾಯರಿ ವಂದಿಸಿದರು. ಸಹಪ್ರಾಧ್ಯಾಪಕ ಡಾ.ಸರ್ವಜಿತ್ ಕಾರ್ಯಕ್ರಮ ನಿರೂಪಿಸಿದರು.