ಶಿರ್ವ: ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್ ಸಿಸಿ ಘಟಕವು ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯುಷ್ ಮಂತ್ರಾಲಯವು ನೀಡಿರುವ ಮಾರ್ಗಸೂಚಿಯಂತೆ ಬಿ ವಿತ್ ಯೋಗ, ಬಿ ಏಟ್ ಹೋಂ ಘೋಷವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಂಡಿತ್ತು.
ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಸಾಂಕೇತಿಕವಾಗಿ ಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾಲೇಜು ಹಮ್ಮಿಕೊಂಡಿರುವ ‘ಯೋಗ ಫ್ರಮ್ ಹೋಮ್’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ, ಉಡುಪಿ ಘಟಕದ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪರ್ಮಿಂದರ್ ಸಿಂಘ್, ಎಲ್ಲಾ ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳು, ಘಟಕದ ಸಹ ಸಂಯೋಜಕಿ ಯಶೋದ, ಸೀನಿಯರ್ ಕ್ಯಾಡೆಟ್ ಅಂಡರ್ ಆಫೀಸರ್ ರಾಮದಾಸ್, ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಮತ್ತು ರಿಯಾನ್ ರಿಷಿ ಅಲ್ಫೋನ್ಸೋ , ಕಾಲೇಜಿನ ಅಧ್ಯಾಪಕರು-ಅಧ್ಯಾಪಕೇತರ ಸಿಬ್ಬಂದಿ, ಎಲ್ಲಾ ಕ್ಯಾಡೆಟ್ ಗಳು ಸಹಕರಿಸಿದರು.