ಕಲ್ಯಾಣ್ ಮಿತ್ರ ಮಂಡಲ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮ

ಕಲ್ಯಾಣ್: ಕರ್ನಾಟಕ ಮಿತ್ರ ಮಂಡಲ ಕಲ್ಯಾಣ್ ಪೂರ್ವ ಇದರ ವತಿಯಿಂದ ಮಾರ್ಚ್ 26ರಂದು ಸಂಘದ ಕಚೇರಿಯಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ಪ್ರಾರಂಭದಲ್ಲಿ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ನಂತರ ತಾಯಿ ಶಾರದಾಂಬೆಗೆ ಧನಂಜಯ ಪಾಲನ್ ರವರಿಂದ ಮಹಾ ಮಂಗಳಾರತಿ ನೆರವೇರಿತು ಹಾಗೂ ರಾಜೇಶ್ ಪೂಜಾರಿ ಅವರಿಂದ ಸಾಮೂಹಿಕ ಪ್ರಾರ್ಥನೆ ಜರುಗಿತು. ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಮಹಿಳಾ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಸದಸ್ಯರು ಪ್ರಾರ್ಥನೆ ಗೀತೆ ಹಾಡಿದರು.

ಸದಸ್ಯ ರಾಜೇಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪುರಾತನ ಕಾಲದ ಬಾಲ್ಯ ವಿವಾಹ, ಸತಿ ಪದ್ಧತಿಯಂತಹ ಸಮಾಜ ವಿರೋಧಿ ಆಚರಣೆಯಿಂದ ಮಹಿಳಾ ಶೋಷಣೆ ಹಾಗೂ ನಂತರದ ಬೆಳವಣಿಗೆಯಲ್ಲಿ ಹಲವಾರು ಸಮಾಜ ಸುಧಾರಕರ ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಮಹಿಳೆಯರ ಬದುಕು-ಭವಿಷ್ಯ ಎರಡಲ್ಲೂ ಸುಧಾರಣೆ ಕಂಡು ಬಂದಿದೆ. ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಮಾಜಿ ಪ್ರಧಾನಿ ಇಂದಿರಾಗಾಂಧಿಯಂತಹ ಧೀಮಂತ ಮಹಿಳೆಯರಿಂದ ಪ್ರೇರಣೆ ಹೊಂದಿ ಮಹಿಳೆಯರು ಸದೃಢ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಸಹಭಾಗಿಯಾಗಿರುವರು ಎಂದು ಹೇಳಿದರು.

ಸಂಘದ ಅಧ್ಯಕ್ಷ ದಿವಾಕರ ಸಾಲ್ಯಾನ್ ಸಭೆಯನ್ನುದ್ದೇಶಿಸಿ ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಒಳ್ಳೆಯ ಸಂಸ್ಕಾರವನ್ನು ನೀಡುತ್ತಾ ದೇಶದ ಸುಸಂಕೃತ ನಾಗರಿಕರನ್ನಾಗಿ ರೂಢಿಸುವಂತೆ ಕರೆ ನೀಡಿದರು. ಅನವರತ ತಮ್ಮ ವಿವಿಧ ಕರ್ತವ್ಯಗಳನ್ನು ನಿಸ್ವಾರ್ಥ ಸೇವೆಯಿಂದ ಮಾಡುತ್ತಿರುವ ಮಹಿಳೆ ನಿಜಕ್ಕೂ ಸಂಸಾರದ ಕಣ್ಣು ಎಂದು ಹೇಳಿದ ಅವರು, ಎಲ್ಲಿ ಮಹಿಳೆಯರಿಗೆ ಗೌರವವಿದೆಯೋ ಅಲ್ಲಿ ಭಗವಂತನ ವಾಸವಿದೆ ಎಂಬ ಹಿರಿಯರ ಮಾತನ್ನು ತಿಳಿಸುತ್ತಾ ಮಹಿಳೆಯರು ನಿಜಕ್ಕೂ ಭಗವಂತನ ಅಭೂತಪೂರ್ವ ಕೊಡುಗೆ. ಮಹಿಳಾ ದಿನಾಚರಣೆಯ ಪರಿಕಲ್ಪನೆ ದೈನಂದಿನ ಬದುಕಿನಲ್ಲಿ ವಾಸ್ತವಿಕವಾಗಿ ಪರಿಪೂರ್ಣಗೊಳ್ಳಬೇಕು ಎಂದು ಹೇಳಿ ಕಾರ್ಯ ಕ್ರಮದಲ್ಲಿ ಬಾಗವಹಿಸಿದ ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ಮಹಿಳಾ ಕಾರ್ಯಾಧ್ಯಕ್ಷೆ ದೇವಕಿ ಪೂಜಾರಿ ತಮ್ಮ ಮಹಿಳಾ ಸದಸ್ಯರ ಸಹಕಾರವನ್ನು ಸ್ಮರಿಸುತ್ತಾ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಕೋಶಾಧಿಕಾರಿ ಪ್ರಶಾಂತ್ ಪೂಜಾರಿ, ಉಮೇಶ್ ಪೂಜಾರಿ, ಮಹಿಳಾ ಕಾರ್ಯಧ್ಯಕ್ಷೆ ದೇವಕಿ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೋಟ್ಯಾನ್, ಪ್ರೀತಿ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ವಂದಿಸಿದರು. ಬಳಿಕ ಮಹಿಳೆಯರಿಂದ ಸನಾತನ ಧರ್ಮದ ಪ್ರತೀಕವಾದ ಹಳದಿ ಕುಂಕುಮ ಕಾರ್ಯಕ್ರಮವು ಹರ್ಷೋಲ್ಲಾಸದಿಂದ ಜರುಗಿತು. ಕುಮಾರಿ ವರ್ಷ ಪೂಜಾರಿ ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆ ಏರ್ಪಡಿಸಿದ್ದರು.

ಚಿತ್ರ, ವರದಿ: ರಮೇಶ್ ಉದ್ಯಾವರ್
9820949820