ಇಂದು ಅಂತರಾಷ್ಟ್ರೀಯ ಮಾತೃಭಾಷಾ ದಿನ: ಮಾತೃ ಭಾಷೆಯಲ್ಲಿ ಮಾತನಾಡೋಣ… ಸಂಸ್ಕೃತಿ ಉಳಿಸೋಣ….

 

ಹೊಸದಿಲ್ಲಿ: ಪ್ರತಿ ವರ್ಷ ಫೆಬ್ರವರಿ 21ನ್ನು ಅಂತರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾ ಸಂಸ್ಕೃತಿಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾಷೆ ಕೇವಲ ಸಂವಹನ ಸಾಧನ ಮಾತ್ರವಲ್ಲ; ಇದು ವಿಶಾಲವಾದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ.

ಭಾರತದಲ್ಲಿ 2022 ರಲ್ಲಿ ಮುನ್ನೆಲೆಗೆ ಬಂದಿರುವ ವಿಷಯ “ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವುದು: ಸವಾಲುಗಳು ಮತ್ತು ಅವಕಾಶಗಳು”. ಬಹುಭಾಷಾ ಶಿಕ್ಷಣವನ್ನು ಮುಂದುವರಿಸಲು ಮತ್ತು ಎಲ್ಲರಿಗೂ ಗುಣಮಟ್ಟದ ಬೋಧನೆ ಮತ್ತು ಕಲಿಕೆಯ ಅಭಿವೃದ್ಧಿಯನ್ನು ಬೆಂಬಲಿಸಲು ತಂತ್ರಜ್ಞಾನದ ಸಂಭಾವ್ಯ ಪಾತ್ರದ ಮೇಲೆ ಇದನ್ನು ಕೇಂದ್ರೀಕರಿಸಲಾಗಿದೆ.

ನಾವು ಪ್ರತಿ ಎರಡು ವಾರಗಳಿಗೊಮ್ಮೆ ಒಂದು ಭಾಷೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರಪಂಚದಲ್ಲಿ ಮಾತನಾಡುವ ಅಂದಾಜು 6000 ಭಾಷೆಗಳಲ್ಲಿ ಕನಿಷ್ಠ 43% ಅಪಾಯದಂಚಿನಲ್ಲಿದೆ ಎಂದು ವಿಶ್ವಸಂಸ್ಥೆಯು ಉಲ್ಲೇಖಿಸಿದೆ.

ಭಾರತದಲ್ಲಿ ಒಟ್ಟು 121 ಭಾಷೆಗಳಿವೆ. ಅವುಗಳಲ್ಲಿ 22 ಅನ್ನು ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‌ನ ಭಾಗ A ಯಲ್ಲಿ ಉಲ್ಲೇಖಿಸಲಾಗಿದೆ, ಉಳಿದ 99 ಅನ್ನು ಭಾಗ B ನಲ್ಲಿ ನಿರ್ದಿಷ್ಟಪಡಿಸಲಾಗಿದೆ. ಅದರ ಜೊತೆಗೆ ಭಾರತವು 270 ಮಾತೃಭಾಷೆಗಳನ್ನು ಹೊಂದಿದೆ. ತುಳುವರ ಮಾತೃಭಾಷೆ ‘ತುಳು’ವಿಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇನ್ನೂ ಸ್ಥಾನಮಾನ ಸಿಕ್ಕಿಲ್ಲದಿರುವುದು ತುಳುವರಿಗೆ ಅತೀವ ನೋವಿನ ಸಂಗತಿ. ತುಳು ಸ್ವಂತ ಲಿಪಿ ಹೊಂದಿರುವ ಸಮೃದ್ದ ಭಾಷೆಯಾಗಿದ್ದರೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನಮಾನಕ್ಕಾಗಿ ಇನ್ನೂ ಹೋರಾಟ ನಡೆಯುತ್ತಲೆ ಇದೆ.

2011 ರ ಜನಗಣತಿಯ ಪ್ರಕಾರ, ಭಾರತದ ಅತ್ಯಂತ ಜನಪ್ರಿಯ ಭಾಷೆ ಹಿಂದಿ, ಇದು 52 ಕೋಟಿಗೂ ಹೆಚ್ಚು ಜನರ ಮಾತೃಭಾಷೆಯಾಗಿದೆ. ಪ್ರಾಚೀನ ಕಾಲದಲ್ಲಿ ಇಡಿಯ ವಿಶ್ವದಲ್ಲೆ ಅತಿ ಹೆಚ್ಚು ಮಾತನಾಡಲ್ಪಡುತ್ತಿದ್ದ ಸಂಸ್ಕೃತ ಭಾಷೆಯು ಇಂದು ಕೇವಲ 24,821 ಜನರ ಮಾತೃ ಭಾಷೆಯಾಗಿದೆ! ಇಂಗ್ಲಿಷ್ ನಿಗದಿತವಲ್ಲದ ಭಾಷೆಗಳ ವರ್ಗದಲ್ಲಿ ಬರುತ್ತದೆ, ಇದನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಲಾಗಿಲ್ಲ.

 

ಪ್ರತಿಯೊಬ್ಬರೂ ಇಂಗ್ಲೀಷ್ ವ್ಯಾಮೋಹ ತ್ಯಜಿಸಿ ತಮ್ಮ ತಮ್ಮ ಮಾತೃ ಭಾಷೆಯಲ್ಲಿ ಮಾತನಾಡುವ ಅಭ್ಯಾಸ ಬೆಳೆಸಿಕೊಂಡಲ್ಲಿ ಭಾಷೆಯ ಜೊತೆಗೆ ಸಂಸ್ಕೃತಿಯೂ ಉಳಿಯುವುದು.