ನಿಟ್ಟೆಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ:ಸಂಶೋಧನೆ,ಅಭಿವೃದ್ಧಿ ಕುರಿತು ಹೊಸ ನೋಟ ನೀಡಿದ ಕಾರ್ಯಕ್ರಮ

ಕಾರ್ಕಳ: ‘ಇಂದಿನ ದಿನಗಳಲ್ಲಿ ಅಂತರ್ವಿಭಾಗೀಯ (ಇಂಟರ್ ಡಿಸಿಪ್ಲಿನರಿ) ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಕಾಣುವಂತಾಗಿದೆ. ಪ್ರತಿಯೊಬ್ಬ ಸಂಶೋಧಕನೂ ತನ್ನ ಜ್ಞಾನವನ್ನು ಬೇರೆ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಉಪಯೋಗಿಸಬಹುದು ಹಾಗೂ ಅದರಿಂದ ಇನ್ನುಳಿದ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ಚಿಂತಿಸಬೇಕು’ ಎಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕೆಮಿಸ್ಟ್ರೀ, ಫಿಸಿಕ್ಸ್ & ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ಪ್ರಾಧ್ಯಾಪಕ ಪ್ರೊ. ಪ್ರಸಾದ್ ಎರ್ಲಗಡ್ಡ ಅಭಿಪ್ರಾಯಪಟ್ಟರು.

ಅವರು ಡಿ.೨೨ ಹಾಗೂ ೨೩ ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿರುವ ಎರಡು ದಿನಗಳ “ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್” ಅಂತಾರಾಷ್ಟ್ರೀಯ ಮಟ್ಟದ ಮಲ್ಟಿ ಕಾನ್ಫರೆನ್ಸ್ ‘ಐ.ಸಿ.ಇ.ಟಿ.ಇ-೨೦೨೨’ನ್ನು ಉದ್ಘಾಟಿಸಿ ಮಾತನಾಡಿದರು. ‘ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ಅವಲಂಬನೆ ಅತಿಹೆಚ್ಚಾಗಿ ಕಂಡರೂ ಅದನ್ನು ಸಾಮಾಜಿಕ ಅಭಿವೃದ್ಧಿಯ ದೃ‌ಷ್ಟಿಯಿಂದ ಉತ್ತಮ ಬೆಳವಣಿಗೆಯ ಅಂಶವಾಗಿ ಕಾಣಬಹುದಾಗಿದೆ’ ಎಂದರು.

ಗೌರವ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಂಗಳೂರಿನ ಐ.ಐ.ಎಸ್ಸಿ ಪ್ರೊಫೆಸರ್ ಡಾ.ಡಿ ನಾಗೇಶ್ ಕುಮಾರ್, ಸಿ.ಎಸ್.ಐ.ಆರ್-ಎನ್.ಎ.ಎಲ್ ಬೆಂಗಳೂರಿನ ವಿಜ್ಞಾನಿ ಡಾ.ಹರೀಶ್ ಸಿ ಬಾರ್ಶೀಲಿಯಾ, ಐಐಟಿ ಭಿಲೈ ಇನ್ನೋವೇಶನ್ ಸಿ.ಇ.ಒ ಡಾ.ಬಿ.ಕೆ ಮೂರ್ತಿ, ಐಐಟಿಡಿಎಂ ಜಬಲ್ಪುರ್ ನ ಪ್ರೊಫೆಸರ್ ಡಾ.ಪುನೀತ್ ತಂಡನ್, ಕುವೈತ್ ಕಾಲೇಜ್ ಆಫ್ ಸೈನ್ಸ್ & ಟೆಕ್ನಾಲಜಿಯ ಪ್ರೊಫೆಸರ್ ಡಾ.ಎಂ ಮುರುಘಪ್ಪನ್, ಜೆ.ಎಸ್.ಎಸ್ ಮೈಸೂರಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರಸನ್ನ ಕುಮಾರ್ ಎಸ್  ಮಾತನಾಡಿ ಸಂಶೋಧನಾ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ವಿವರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕಾನ್ಫರೆನ್ಸ್ ಪ್ರೊಸೀಡಿಂಗ್ಸ್ ಪುಸ್ತಕವನ್ನು ಡಾ.ಪ್ರಸಾದ್ ಎರ್ಲಗಡ್ಡ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ‘ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಾಣಲು ಇಂತಹ ವಿಜ್ಞಾನ ಸಮ್ಮೇಳನಗಳು ಒಂದು ವೇದಿಕೆಯಾಗಲಿದೆ. ಪರಿಸರವನ್ನು ಸಂರಕ್ಷಿಸುವಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಅರಿತು ಕೆಲಸ ನಡೆಸಬೇಕು. ಇಂದಿನ ದಿನಗಳಲ್ಲಿ ಮಾಲಿನ್ಯದ ಮೂಲಕ ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿದೆ. ಮಾನವ ಜೀವಿಯು ಈ ಕಲುಶಿತ ಮಣ್ಣಿನ ಮೂಲಕ ಬೆಳೆದ ಬೆಳೆಯನ್ನು ಆಹಾರವಾಗಿ ಸ್ವೀಕರಿಸಿ ಆರೋಗ್ಯ ತೊಂದರೆಯನ್ನು ಕಾಣುತ್ತಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ. ಸಂಶೋಧನೆಯೊಂದಿಗೆ ಪರಿಸರ ಸಂರಕ್ಷಣೆಯ ಬಗೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಅಂತರ್‌ವಿಭಾಗೀಯ ಬೋಧನೆ, ಸಂಶೋಧನೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಬೆಳವಣಿಗೆ ಕಾಣಲು ಸಾಧ್ಯ’ ಎಂದು ಅವರು ಹೇಳಿದರು.

‘ಐ.ಸಿ.ಇ.ಟಿ.ಇ-೨೦೨೨’ ಮಲ್ಟಿ ಕಾನ್ಫರೆನ್ಸ್ ನ ಅಡಿಯಲ್ಲಿ ಬಯೋಟೆಕ್ನಾಲಜಿ ವಿಭಾಗದ ವತಿಯಿಂದ ‘ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ನರ್ಚರಿಂಗ್ ಇನ್ನೋವೇಟಿವ್ ಟೆಕ್ನಾಲಾಜಿಕಲ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್- ಬಯೋಸೈನ್ಸ್’,  ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ‘ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಸಿವಿಲ್ ಇಂಜಿನಿಯರಿಂಗ್ ಟ್ರೆಂಡ್ಸ್ ಆ್ಯಂಡ್ ಚ್ಯಾಲೆಂಜಸ್ ಫಾರ್ ಸಸ್ಟೈನೆಬಿಲಿಟಿ’, ಎಂ.ಸಿ.ಎ, ಕಂಪ್ಯೂಟರ್ ಸೈನ್ಸ್, ಇನ್ಫೋರ್ಮೇಶನ್ ಸೈನ್ ವಿಭಾಗದ ಜಂಟಿ ಆಶ್ರಯದಲ್ಲಿ ‘ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ & ಡೇಟಾ ಇಂಜಿನಿಯರಿಂಗ್’, ಎಲೆಕ್ಟ್ರಿಕಲ್ ವಿಭಾಗದ ವತಿಯಿಂದ ‘ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಎಡ್ವಾನ್ಸಸ್ ಇನ್ ರಿನೀವೇಬಲ್ ಎನರ್ಜಿ & ಇಲೆಕ್ಟ್ರಿಕ್ ವೆಹಿಕಲ್, ಇಲೆಕ್ಟ್ರಾನಿಕ್ಸ್ ವಿಭಾಗದ ‘ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ವಿ.ಎಲ್.ಎಸ್.ಐ, ಸಿಗ್ನಲ್ ಪ್ರೊಸೆಸಿಂಗ್, ಪವರ್ ಎಲೆಕ್ಟ್ರಾನಿಕ್ಸ್, ಐಒಟಿ, ಕಮ್ಯೂನಿಕೇಶನ್ & ಎಂಬೆಡೆಡ್ ಸಿಸ್ಟಮ್ಸ್’, ಮೆಕ್ಯಾನಿಕಲ್ ವಿಭಾಗದ ‘ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಸ್ಮಾರ್ಟ್ ಆ್ಯಂಡ್ ಸಸ್ಟೈನೇಬಲ್ ಡೆವಲಪ್ಮೆಂಟ್ಡೆ ಇನ್ ಮೆಟೀರಿಯಲ್ಸ್, ಮ್ಯಾನುಫ್ಯಾಕ್ಚರಿಂಗ್ ಆಂಡ್ ಎನರ್ಜಿ ಇಂಜಿನಿಯರಿಂಗ್’ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗದ ವತಿಯಿಂದ ‘ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಮೆಟೀರಿಯಲ್ಸ್ ಸೈನ್ಸ್ ಆಂಡ್ ಮ್ಯಾತಮೆಟಿಕ್ಸ್ ಫಾರ್ ಎಡ್ವಾನ್ಸ್ಡ್ ಟೆಕ್ನಾಲಜಿ’ ಎಂಬ ವಿವಿಧ ವಿಷಯಗಳ ಬಗೆಗೆ ಒಟ್ಟು ೭ ಕಾನ್ಫರೆನ್ಸ್ ಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಎರಡು ದಿನಗಳ ಕಾನ್ಫರೆನ್ಸ್ ನ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾದ ವಿವಿಧ ವಿಭಾಗಗಳ ೨೦ ಸಾಧಕರು ದಿಕ್ಸೂಚಿ ಭಾಷಣಗಳನ್ನು ನಡೆಸಲಿರುವರು. ಈ ಕಾನ್ಫರೆನ್ಸ್ನಲ್ಲಿ ೩೨೦ ವಿಮರ್ಶಾತ್ಮಕ ಪ್ರಬಂಧಗಳು ಮಂಡನೆಗೊಳ್ಳಲಿವೆ.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಕಾನ್ಫರೆನ್ಸ್ನ ಮುಖ್ಯಸಂಯೋಜಕ ಹಾಗೂ ರಿಸರ್ಚ್ ವಿಭಾಗದ ಡೀನ್ ಡಾ| ಸುದೇಶ್ ಬೇಕಲ್ ಕಾನ್ಫರೆನ್ಸ್ ಬಗೆಗೆ ಸಮಗ್ರ ವಿವಿರ ನೀಡಿದರು. ಕಾನ್ಫರೆನ್ಸ್ನ ಕಾರ್ಯದರ್ಶಿ ಡಾ| ಶ್ರೀರಾಮ್ ಮರಾಠೆ ಅತಿಥಿಗಳನ್ನು ಪರಿಚಯಿಸಿದರು. ಉದ್ಘಾಟನಾ ಕಾರ್ಯಕ್ರಮದ ಸಂಯೋಜಕ ಡಾ.ರಘುನಂದನ್ ವಂದಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ರೋಶನ್ ಫೆರ್ನಾಂಡಿಸ್ ಹಾಗೂ ಮಾನವಿಕ ವಿಭಾಗದ ಸಹಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.