ಮಣಿಪಾಲ: ಬಾಲ್ಯದ ಕ್ಯಾನ್ಸರ್‌ಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳು, ಅವರ ಆರೈಕೆ ಮಾಡುವವರು ಮತ್ತು ಕ್ಯಾನ್ಸರ್ ನಿಂದ ಬದುಕುಳಿದವರಿಗೆ ಬೆಂಬಲ ವ್ಯಕ್ತಪಡಿಸಲು ಜಾಗತಿಕವಾಗಿ ಪ್ರತಿ ವರ್ಷ ಫೆಬ್ರವರಿ 15 ರಂದು ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನವನ್ನು (ಐ ಸಿ ಸಿ ಡಿ ) ಆಚರಿಸಲಾಗುತ್ತದೆ. “ಉತ್ತಮ ಬದುಕುಳಿಯುವಿಕೆ “ನಿಮ್ಮ ಕೈಗಳ ಮೂಲಕ ಸಾಧಿಸಬಹುದಾಗಿದೆ” ಎಂಬುದು ಐಸಿಸಿಡಿಯ ಮೂರು ವರ್ಷಗಳ ಧ್ಯೇಯ (2021-2023) ವಾಕ್ಯವಾಗಿದ್ದು, ಇದು ಈ ಅಭಿಯಾನದ ಎರಡನೇ ವರ್ಷವಾಗಿದೆ.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶಂಕರ್ ಮಹಾದೇವನ್ ಅಕಾಡೆಮಿ ‘ನಿರ್ವಾಣ’ (SMA Nirvana) ಸಹಭಾಗಿತ್ವದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆ ಮಾಡುವವರಿಗೆ ಸಂಗೀತ ಕಾರ್ಯಕ್ರಮ ಮತ್ತು ಮೋಜಿನ ರಸಪ್ರಶ್ನೆ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಆಯೋಜಿಸಲಾಗಿತ್ತು.
‘ಎಸ್ ಎಂ ಎ ನಿರ್ವಾಣ’ ಶಂಕರ್ ಮಹಾದೇವನ್ ಅಕಾಡೆಮಿ ಟ್ರಸ್ಟ್‌ನ ಉಪಕ್ರಮವಾಗಿದ್ದು, ಕ್ಯಾನ್ಸರ್ ರೋಗಿಗಳಂತೆ ತಮ್ಮ ಜೀವನದಲ್ಲಿ ಪ್ರತಿದಿನ ತೀವ್ರ ಸವಾಲುಗಳನ್ನು ಎದುರಿಸುತ್ತಿರುವ ಜನರಿಗೆ ಸಂಗೀತದ ಮೂಲಕ ಸಂತೋಷವನ್ನು ತರುವ ಪ್ರಯತ್ನ ಮಾಡುತ್ತಿದೆ. ಕು. ಮೋಕ್ಷಾ ಮತ್ತು ಕು. ಆಕಾಂಕ್ಷಾ ಎಂಬ ಇಬ್ಬರು ಮಕ್ಕಳು ಅಕಾಡೆಮಿ ಕಲಾವಿದೆ ಸುಕೃತಿ ಅಜಯ್ ಕುಮಾರ್ ಅವರೊಂದಿಗೆ ಪ್ರದರ್ಶನ ನೀಡಿದರು.
ಮಕ್ಕಳ ಮತ್ತು ಆರೈಕೆ ಮಾಡುವವರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಮತ್ತು ಗುಣಪಡಿಸಲು ನಿಯತಕಾಲಿಕವಾಗಿ ಇಂತಹ ಮನರಂಜನಾ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಮಕ್ಕಳ ರಕ್ತ ಶಾಸ್ತ್ರ ಮತ್ತು ಅಂಕೋಲಜಿ ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ ಭಟ್ ಕೆ ಹೇಳಿದರು.
ಸ್ವಾಗತ ಭಾಷಣದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು, ಮಕ್ಕಳ ರಕ್ತ ಶಾಸ್ತ್ರ ಮತ್ತು ಅಂಕೋಲಜಿ ತಂಡವು, ಈ ಸಂಗೀತ ಕಾರ್ಯಕ್ರಮವು ಆಯೋಜಿಸುವುದರ ಮೂಲಕ ರೋಗಿಗಳು ಮತ್ತು ಅವರ ಆರೈಕೆ ಮಾಡುವವರಿಗೆ ಮನರಂಜನೆ ಮೂಡಿಸುವ ಈ ಪ್ರಯತ್ನವನ್ನು ಶ್ಲಾಘಿಸಿದರು.
ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ ಇಡೀ ತಂಡವನ್ನು ಕೆಎಂಸಿ ಡೀನ್ ಡಾ.ಶರತ್ ಕುಮಾರ್ ರಾವ್ ಅವರು ಅಭಿನಂದಿಸಿದರು. ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾದ ಡಾ. ನವೀನ್ ಎಸ್ ಸಲಿನ್ಸ್ ಉಪಸ್ಥಿತರಿದ್ದರು. ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕೃತಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.