ತೀವ್ರಗೊಂಡ ಕಡಲಿನ ಅಬ್ಬರ: ಕಾಪು ಲೈಟ್ ಹೌಸ್ ಸುತ್ತಮುತ್ತಲಿನಲ್ಲಿ‌ ಹೆಚ್ಚಿದ ಆತಂಕ

ಕಾಪು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ತೌಕ್ತೆ ಚಂಡಮಾರುತ ಪರಿಣಾಮ ಕಡಲು ಪ್ರಕ್ಷುಬ್ದಗೊಂಡಿದ್ದು, ಕಾಪು ಲೈಟ್ ಸಮೀಪದಲ್ಲಿ ಕಡಲಿನ ಆರ್ಭಟ ಜೋರಾಗಿದೆ. ಇದರಿಂದ ಸಮುದ್ರ ತೀರ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಮುದ್ರ ವಿಸ್ತಾರಗೊಂಡು ಕಡಲ್ಕೊರೆತದ ಭೀತಿ ಎದುರಾಗಿದ್ದು, ಲೈಟ್ ಹೌಸ್ ನ ಸುತ್ತಲೂ ಸಮುದ್ರದ ನೀರು ಆವರಿಸಿಕೊಂಡಿದೆ.
ಕಾಪು ಬೀಚ್ ಸುತ್ತಮುತ್ತಲಿನ ಲೈಟ್ ಹೌಸ್ ವಾರ್ಡ್, ಕೋಟೆ ಕೊಪ್ಪಲ, ಸುಬ್ಬಯ್ಯ ತೋಟ, ಬೈರುಗುತ್ತು ತೋಟ, ಗರಡಿ ವಾರ್ಡ್, ಲಕ್ಷ್ಮೀ ನಗರ ವ್ಯಾಪ್ತಿಯ 30 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ.

ಘಟನಾ ಪ್ರದೇಶಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ತಹಶೀಲ್ದಾರ್ ಪ್ರತಿಭಾ ಆರ್., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮೊದಲಾದವರು ಭೇಟಿ ಪರಿಶೀಲನೆ ನಡೆಸಿದರು.