ಉಡುಪಿ: ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿರುವುದು ಬಿಜೆಪಿಯ ಮನುಸ್ಮೃತಿ ಮನಸ್ಥಿತಿಗೆ ಸಾಕ್ಷಿ. ದಲಿತರ ಮೂಲಕ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆರೋಪಿಸಿದರು.
ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಖಂಡಿಸಿ ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಶನಿವಾರ ಅಜ್ಜರಕಾಡಿನ ಗಾಂಧಿ ಪ್ರತಿಮೆ ಎದುರು ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಸಮಾನತೆ, ಮೇಲು-ಕೀಳು ಹಾಗೂ ಅಸ್ಪೃಶ್ಯತೆಯನ್ನು ದೇವರು ಸೃಷ್ಟಿಸಿಲ್ಲ; ಮನುಷ್ಯರೇ ಸೃಷ್ಟಿಸಿದ್ದಾರೆ. ದಲಿತರನ್ನು ಅಸ್ಪೃಶ್ಯತೆಯ ಹೆಸರಿನಲ್ಲಿ ಶೋಷಿಸುವ ಪ್ರಯತ್ನವನ್ನು ಖಂಡಿಸಬೇಕು. ಖರ್ಗೆ ಅವರಿಗೆ ಅಪಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮೈದಾನವನ್ನು ಮಾತ್ರ ಶುದ್ಧೀಕರಿಸಿದರೆ ಸಾಲದು, ಇಂತಹ ಕೃತ್ಯ ಎಸಗಿದವರ ಅಂತರಂಗ ಹಾಗೂ ಮನಸ್ಥಿತಿಯೂ ಶುದ್ಧವಾಗಬೇಕು ಎಂದು ವ್ಯಂಗ್ಯವಾಡಿದರು.
ಸುಬ್ರಹ್ಮಣ್ಯ ಭಟ್ ಮಾತನಾಡಿ, ದೇಶದ ಅಖಂಡತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಖರ್ಗೆ ಅವರಿಗೆ ಅಪಮಾನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸುದರ್ಶನ್ ಮತ್ತು ಬಳಗದವರು ‘ರಘುಪತಿ ರಾಘವ’ ಹಾಗೂ ‘ವೈಷ್ಣವ ಜನತೋ’ ಭಜನೆ ಹಾಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರಿಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.















