ಪರಶುರಾಮರ ನಕಲಿ ಮೂರ್ತಿ ಪ್ರತಿಷ್ಠಾಪನೆ ಹಿಂದೂ ಧರ್ಮಕ್ಕೆ ಬಗೆದ ದ್ರೋಹ: ಸುಭಾಸ್ ಚಂದ್ರ ಹೆಗ್ಡೆ

ಕಾರ್ಕಳ: ಕರಾವಳಿಯ ಸೃಷ್ಟಿಯ ಕಾರಣಕರ್ತ ಎಂದು ನಾವೆಲ್ಲರೂ ಧಾರ್ಮಿಕ ನಂಬಿಕೆ ಇರಿಸಿ ಕೊಂಡಿದ್ದ ಪರಶುರಾಮರ ಚರಿತ್ರೆಗೆ ಭೈರವ ಅರಸರ ಊರಲ್ಲಿ ಮಸಿ ಬಳಿಯಲು ಹೊರಟಿರುವ ಕಾರ್ಕಳದ ರಾಜಕೀಯ ನಾಯಕರ ರಾಜಕೀಯ ಶೈಲಿಯು ಧರ್ಮವನ್ನೇ ಅಧಪತನ ಮಾಡಲು ಹೊರಟಿರುವುದು ತೀರಾ ಖಂಡನೀಯ ವಿಚಾರ ಎಂದು ಸುಭಾಸ್ ಚಂದ್ರ ಹೆಗ್ಡೆ ಹೇಳಿದ್ದಾರೆ.

ಕಾರ್ಕಳದಲ್ಲಿ ಕಂಚಿನ ಪರಶುರಾಮ ಮೂರ್ತಿಯ ನಿರ್ಮಾಣ ಆಗುವ ಸಂದರ್ಭದಲ್ಲಿ ಎಲ್ಲರೂ ಸಂತಸ ಪಟ್ಟಿದ್ದರು. ಧರ್ಮದ ವಿಚಾರ ಬಂದಾಗ ಕರಾವಳಿಯಲ್ಲಿ ಎಲ್ಲಾ ಹಿಂದೂಗಳು ಕೂಡ ಒಟ್ಟಾಗುತ್ತಾರೆ.

ಈ ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳನ್ನು ರಾಜಕೀಯದ ಆಟಕ್ಕೆ ಕಾರ್ಕಳ ಶಾಸಕರು ಬಳಸಿಕೊಂಡದ್ದಕ್ಕೆ ಬೈಲೂರಿನಲ್ಲಿ ನಿರ್ಮಾಣ ಆಗಿರುವ ಪರಶುರಾಮರ ನಕಲಿ ಮೂರ್ತಿಯೇ ಸಾಕ್ಷಿಯಾಗಿದೆ.

ಕಾರ್ಕಳಕ್ಕೆ ಬಂದ ನೈಜ ಹಿಂದುತ್ವವಾದಿ ಪ್ರಮೋದ್ ಮುತಾಲೀಕ್ ಅವರನ್ನು ಪರಶುರಾಮ ಗಿರಿಯಿಂದ ಹಾರಲು ಕಾರ್ಕಳ ಶಾಸಕ ಸುನಿಲ್ ಕುಮಾರ್ ಭಾಷಣವೊಂದರಲ್ಲಿ ಹೇಳಿದಾಗಲೇ ನಮಗೆಲ್ಲರಿಗೂ ಪರಶುರಾಮರ ಮೂರ್ತಿಯನ್ನು ನಕಲಿ ಮಾಡಿದ್ದಾರೆ ಎಂಬ ಸಂಶಯ ಬಂದಿತ್ತು.

ಕಾರ್ಕಳ ಶಾಸಕರು ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಿ ಹಿಂದೂ ಧರ್ಮಕ್ಕೆ ಅಪಚಾರ ಮಾಡಿದ್ದಾರೆ. ಈ ರೀತಿಯಲ್ಲಿನ ರಾಜಕಾರಣ ಸಮಸ್ತ ಹಿಂದೂ ಧರ್ಮಕ್ಕೆ ಹಾಗೂ ಹಿಂದೂಗಳ ಭಾವನೆಗೆ ಮಾಡಿದ ಅಪಚಾರ ಹಾಗೂ ಅನ್ಯಾಯ.

ಪರಶುರಾಮರ ಮೂರ್ತಿ ನಕಲಿ ಮಾಡಿದ ರಾಜಕೀಯ ನಾಯಕರ ನಕಲಿ ಹಿಂದುತ್ವವನ್ನು ಪರಶುರಾಮ ಸೃಷ್ಟಿಯ ಕರಾವಳಿಯ ಪ್ರತಿ ಮನೆಗಳಲ್ಲೂ ಖಂಡಿಸಬೇಕು ಎಂದು ಉಚ್ಛಾಟಿತ ಬಿಜೆಪಿ ನಾಯಕ ಸುಭಾಸ್ ಚಂದ್ರ ಹೆಗ್ಡೆ ಕಿಡಿಕಾರಿದ್ದಾರೆ.