ಉಡುಪಿ:ಕಾಪು ತಾಲೂಕಿನ ಉಭಯ ಗ್ರಾಮಗಳ ಆರಾಧನಾ ಕೇಂದ್ರವಾದ ಕಳತ್ತೂರು ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಜೀರ್ಣೋದ್ಧಾರ ಕಾಮಗಾರಿಯನ್ನು ಪರಿಶೀಲಿಸಲು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷರು, ಕಾಪು ಕ್ಷೇತ್ರದ ಮಾಜಿ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರು 21-11-2025 ರಂದು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು.
ಭಕ್ತರು ಮತ್ತು ಜೀರ್ಣೋದ್ಧಾರ ಸಮಿತಿಯ ಮನವಿಯ ಮೇರೆಗೆ ಗರಡಿ ಜೀರ್ಣೋದ್ಧಾರಕ್ಕಾಗಿ ಸರ್ಕಾರದ ವತಿಯಿಂದ ರೂ. 25 ಲಕ್ಷ ಅನುದಾನವನ್ನು ಮಂಜೂರು ಮಾಡಿಸುವ ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ, ತಮ್ಮ ಸಚಿವೀಯ ಅವಧಿಯಲ್ಲಿ ಗರಡಿ ಸಂಪರ್ಕ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿದ್ದ ವಿಚಾರವನ್ನು ಸ್ಮರಿಸಿಕೊಂಡ ಅವರು, ಪ್ರಸ್ತುತ ಗರಡಿ ಸಮಿತಿ ಹಾಗೂ ಸ್ಥಳೀಯರ ಬೇಡಿಕೆಯಂತೆ ರಸ್ತೆಯ ಅಗಲೀಕರಣ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯಿಂದ ಬೇಗನೆ ಪ್ರಾರಂಭಗೊಳಿಸಲಾಗುವುದೆಂದು ಭರವಸೆ ನೀಡಿದರು. ರಸ್ತೆ ಅಗಲೀಕರಣಕ್ಕಾಗಿ ಸಾರ್ವಜನಿಕರು ಅಗತ್ಯ ಜಾಗವನ್ನು ಸಹಕರಿಸಿ ಒದಗಿಸಲು ವಿನಂತಿಸಿದರು.
ಗರಡಿಯ ಸಮಗ್ರ ಜೀರ್ಣೋದ್ಧಾರ ನಿಧಿ ಸಂಗ್ರಹಣೆಯ ಕಾರ್ಯಗಳಲ್ಲಿ ತಾವೂ ಸಹ ಸಮಿತಿಯೊಂದಿಗೆ ಕೈಜೋಡಿಸಲು ಸಿದ್ಧರಾಗಿರುವುದಾಗಿ ಸೊರಕೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಾದೂರು–ಕಳತ್ತೂರು ಶ್ರೀ ಬ್ರಹ್ಮ ಬೈದೇರುಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಾದೂರು ಗುತ್ತು ಜಯಕೃಷ್ಣ ಆಳ್ವ, ಗೌರವಾಧ್ಯಕ್ಷರು ಕಳತ್ತೂರು ನಡಿಗುತ್ತು ಜಗದೀಶ ಶೆಟ್ಟಿ ಹಾಗೂ ಉಪಾಧ್ಯಕ್ಷರುಗಳಾದ ದಿವಾಕರ ಬಿ. ಶೆಟ್ಟಿ, ವಸಂತ ಪೂಜಾರಿ ವಳದೂರು ಪಡುಮನೆ, ಗೌರವ ಸಲಹೆಗಾರ ಹಾಗೂ ಎಲ್ಲೂರು ವಿಶ್ವೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅರುಣಾಕರ್ ಶೆಟ್ಟಿ, ಕಳತ್ತೂರು ಗರಡಿ ಮನೆ ವಿಶ್ವನಾಥ ಅಮಿನ್, ಎಲ್ಲೂರು ವಿಶ್ವೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಶಿಕಾಂತ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಆಚಾರ್ಯ, ಪಂಚಾಯತ್ ಸದಸ್ಯರು ಸ್ಟ್ಯಾನ್‌ಲಿ ಕೋರ್ಡ್, ರಾಜೇಶ್ ಮೂಲ್ಯ (ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ), ಪ್ರಕಾಶ್ ಪೂಜಾರಿ ಪಾಲಮೆ, ಅತಿತ್ ಸುವರ್ಣ, ಸುಕೇಶ್ ಪೂಜಾರಿ, ಜಾನ್ಸನ್ ಕರ್ಕಡ, ನಾರಾಯಣ ಮುಕಾರಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.




















