ಜಿಲ್ಲೆಯಲ್ಲಿರುವ ಕಾಲುಸಂಕಗಳ ಗುಣಮಟ್ಟವನ್ನು ಪರಿಶೀಲಿಸಿ, ವರದಿ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿರುವ ಕಾಲುಸಂಕಗಳ ಗುಣಮಟ್ಟವನ್ನು ತಾಂತ್ರಿಕ ತಂಡದೊoದಿಗೆ ಪರಿಶೀಲಿಸಿ, ಅವುಗಳ ಸ್ಥಿತಿಗತಿಗಳ ಕುರಿತ ಸಮರ್ಪಕ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ 600 ಕ್ಕೂ ಹೆಚ್ಚು ಕಾಲುಸಂಕಗಳಿದ್ದು, ಒಂದೊಮ್ಮೆ ಶಿಥಿಲಾವಸ್ಥೆಯಲ್ಲಿರುವ ಕಾಲುಸಂಕಗಳ ಮೇಲೆ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಚರಿಸಿದ್ದಲ್ಲಿ ಪ್ರಾಣಹಾನಿ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಹೊಸ ಕಾಲುಸಂಕಗಳ ನಿರ್ಮಾಣದ ಜೊತೆಗೆ ಈಗಾಗಲೇ ಅಸ್ಥಿತ್ವದಲ್ಲಿರುವ ಕಾಲುಸಂಕಗಳ ದುರಸ್ಥಿಗೆ ಆದ್ಯತೆಯ ಮೇಲೆ ಕ್ರಮವಹಿಸುವುದರೊಂದಿಗೆ ಯಾವುದೇ ಅವಘಡಗಳು ಸಂಭವಿಸದoತೆ ಮುನ್ನೆಚ್ಚರಿಕೆ ವಹಿಸಬೇಕೆಂದರು. ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಈವರೆಗೆ ವಾಡಿಕೆಗೆ 1959 ಮಿ.ಮೀ. ಮಳೆಯಾಗಬೇಕಿತ್ತು.

ಆದರೆ 1182 ಮಿ.ಮೀ ನಷ್ಟು ಮಳೆಯಾಗಿ ಶೇ. 40 ರಷ್ಟು ಮಳೆಯ ಕೊರತೆ ಆಗಿದೆ ಎಂದ ಅವರು, ಈಗಾಗಲೇ ಪೂರ್ವ ಮುಂಗಾರು ಮಳೆಯಿಂದ ಮಾನವ ಹಾನಿ ಹಾಗೂ ಜಾನುವಾರು ಜೀವ ಹಾನಿ ಪ್ರಕರಣಗಳಿಗೆ ಸಂಬoಧಿಸಿದ ಪರಿಹಾರದ ಮೊತ್ತದ ವಿತರಣೆ ಬಾಕಿ ಉಳಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಈವರೆಗೂ ಕಂಡುಬoದಿಲ್ಲ. ಮುಂದಿನ 44 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಲಭ್ಯವಿದೆ. ಮುಂಗಾರು ಹಂಗಾಮಿನಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಪೂರೈಕೆ ಮಾಡಬೇಕು. ರೈತರ ಅವಶ್ಯಕತೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಹಂತಹoತವಾಗಿ ದಾಸ್ತಾನೀಕರಿಸಿ, ರೈತರಿಗೆ ವಿತರಿಸಬೇಕು ಎಂದ ಅವರು, ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದoತೆ ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.

ಈಗಾಗಲೇ ಜಿಲ್ಲೆಯಲ್ಲಿ 4720 ಮೆ.ಟನ್ ನಷ್ಟು ರಸಗೊಬ್ಬರ ದಾಸ್ತಾನು ಇದ್ದು, ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣು ಪರೀಕ್ಷಾ ಆಧಾರಿತ ಪೋಷಕಾಂಶಗಳ ಶಿಫಾರಸ್ಸು ಹಾಗೂ ಹಸಿರೆಲೆ ಗೊಬ್ಬರದ ಬೀಜಗಳ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ಜನವರಿ ಯಿಂದ ಜೂನ್ ವರೆಗೆ ತೋಟಗಾರಿಕೆ ಬೆಳೆಗಳಿಗೆ ಸಂಬoಧಿಸಿದoತೆ 9.34 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಅಡಿಕೆ ಹಾಗೂ ತೆಂಗು ಬೆಳೆಗಳ ಹಾನಿಯಾಗಿ 28.64 ಲಕ್ಷ ರೂ. ನಷ್ಟ ಉಂಟಾಗಿದೆ ಎಂದ ಅವರು, ಬೆಳೆ ಹಾನಿ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು. ಅಡಿಕೆ ಬೆಳೆಗಾರರಿಗೆ ಸಕಾಲದಲ್ಲಿ ಸಸಿಗಳನ್ನು ವಿತರಿಸಿ, ಕೀಟ ನಿರ್ವಹಣೆ, ಕೊಳೆ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ತಾಲೂಕು ಮಟ್ಟದಲ್ಲಿ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಜಿಲ್ಲೆಯ ಕಾರ್ಕಳ ತಾಲೂಕಿನ 17 ಗ್ರಾಮ ಪಂಚಾಯತಿಗಳ 21 ಗ್ರಾಮ, ಕುಂದಾಪುರ ತಾಲೂಕಿನ 36 ಗ್ರಾಮ ಪಂಚಾಯತ್‌ಗಳ 57 ಗ್ರಾಮ, ಉಡುಪಿ ತಾಲೂಕಿನ 4 ಗ್ರಾಮ ಪಂಚಾಯತ್‌ಗಳ 6 ಗ್ರಾಮ, ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತ್‌ಗಳ 22 ಗ್ರಾಮ, ಬ್ರಹ್ಮಾವರ ತಾಲೂಕಿನ 13 ಗ್ರಾಮ ಪಂಚಾಯತ್‌ಗಳ 25 ಗ್ರಾಮ, ಕಾಪು ತಾಲೂಕಿನ 4 ಗ್ರಾಮ ಪಂಚಾಯತ್‌ಗಳ 5 ಗ್ರಾಮ ಹಾಗೂ ಹೆಬ್ರಿ ತಾಲೂಕಿನ 5 ಗ್ರಾಮ ಪಂಚಾಯತ್‌ಗಳ 10 ಗ್ರಾಮಗಳು ಸೇರಿದಂತೆ ಒಟ್ಟು 94 ಗ್ರಾಮ ಪಂಚಾಯತ್‌ಗಳ 146 ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದಾದ ಸಾಧ್ಯತೆ ಇದ್ದು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಪರ್ಯಾಯ ಮೂಲಗಳಿಂದ ಕುಡಿಯುವ ನೀರಿನ ಸರಬರಾಜು ಮಾಡಬೇಕು.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಪೂರೈಕೆಯಲ್ಲಿ ಅಭಾವ ಉಂಟಾಗದoತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿರುವ ಶಾಲಾ – ಅಂಗನವಾಡಿ ಕಟ್ಟಡ ಹಾಗೂ ಕೊಠಡಿಗಳ ಸದೃಢತೆಯ ಬಗ್ಗೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳ ಅಭಿಯಂತರರು, ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ, ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಬಳಕೆಗೆ ಯೋಗ್ಯವಿಲ್ಲದಿದ್ದಲ್ಲಿ ಅಂತಹ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದೇ ಬದಲೀ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಬಂದಿರುವ ಹಿನ್ನೆಲೆ, ನಗರ ಹಾಗೂ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಮುಂದಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈಗಿನಿಂದಲೇ ಖಾಸಗಿ ಬೋರ್‌ವೆಲ್, ಬಾವಿ, ಟ್ಯಾಂಕರ್‌ಗಳನ್ನು ಗುರುತಿಸಿಟ್ಟುಕೊಂಡು ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲಕ ಸಮಸ್ಯೆ ಉಂಟಾಗದoತೆ ನೋಡಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಡಿ.ಎಫ್.ಓ ರುಥ್ರೇನ್ ಪಿ, ವೈಲ್ಡ್ಲೈಫ್ ಡಿ.ಎಫ್.ಓ ಶಿವರಾಮ ಎಂ ಬಾಬು, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮೀಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.