ಕರಾವಳಿಯ ಸಂಸದರಿಂದ ಮೀನುಗಾರರಿಗೆ ಅನ್ಯಾಯ: ರಮೇಶ್ ಕಾಂಚನ್

ಉಡುಪಿ: ಸುವರ್ಣ ತ್ರಿಭುಜ ಬೋಟ್‌ ದುರಂತ ನಡೆದು ಎರಡು ವರ್ಷ ಸಂದಿದೆ. ಆದರೆ ದುರಂತದಲ್ಲಿ ಮೃತರಾದ ಏಳು ಮಂದಿ ಮೀನುಗಾರರ ಕುಟುಂಬಕ್ಕೆ ಕೇಂದ್ರ ಸರಕಾರದಿಂದ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ತುಟಿಬಿಚ್ಚದ ಕರಾವಳಿಯ ಸಂಸದರ ವಿರುದ್ಧ ಕಾಂಗ್ರೆಸ್ ಮುಖಂಡ, ಉಡುಪಿ ನಗರ ಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೋಟ್ ದುರಂತ ನಡೆದು ಎರಡು ವರ್ಷ ಕಳೆದಿದೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಉನ್ನತಮಟ್ಟದ ತನಿಖೆಯಾಗಿಲ್ಲ. ಅಲ್ಲದೆ, ಮೀನುಗಾರರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಬಗ್ಗೆಯೂ ಕೇಂದ್ರ ಸರಕಾರ ಯಾವುದೇ ಕ್ರಮಕೈಗೊಳ್ಳದಿರುವುದು ವಿಷಾದನೀಯ ಎಂದಿದ್ದಾರೆ.

ಈ ದುರ್ಘಟನೆಗೆ ನೌಕಾಪಡೆಯ ಬೃಹತ್ ನೌಕೆಯೇ ಕಾರಣ ಗೊತ್ತಾಗಿದ್ದರೂ ಕರಾವಳಿಯ ಸಂಸದರಾದ ನಳಿನ್ ಕುಮಾರ್ ಕಟೀಲ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಮೀನುಗಾರ ಸಮುದಾಯವನ್ನು ತಮ್ಮ‌ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಇವರು, ಮೀನುಗಾರರಿಗೆ ಅನ್ಯಾಯ ಆದಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಾರದಿರುವುದು ದುರಂತ. ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರಕ್ಕೂ ಪ್ರಯತ್ನಿಸದಿರುವುದು ಖಂಡನೀಯ ಎಂದು ಕಾಂಚನ್ ಕಿಡಿಕಾರಿದ್ದಾರೆ.

ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನೌಕಾಪಡೆಯನ್ನು ರಕ್ಷಿಸಲು ಸತ್ಯಾಂಶ ಮರೆಮಾಚಲಾಗಿತ್ತು. ಅಧಿಕಾರಿಗಳು ನಿಜ ಹೇಳಲು ಮುಂದೆ ಬಂದು ಕೊನೆ ಕ್ಷಣದಲ್ಲಿ ಒಪ್ಪಿಕೊಂಡಿಲ್ಲದಿರಲು ಏನು ಕಾರಣವೆಂದು ಬಹಿರಂಗ ಪಡಿಸಲಿ. ಬೋಟ್ ಅವಘಡದಲ್ಲಿ ಕೇಂದ್ರ ಸರಕಾರ ಯಾವುದೇ ಪರಿಹಾರ ನೀಡದೆ ಮೀನುಗಾರ ಕುಟುಂಬಕ್ಕೆ ಅನ್ಯಾಯ ಎಸಗಿದೆಂದು ಕಾಂಚನ್ ದೂರಿದ್ದಾರೆ.