ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್‌ನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲಾಗುವುದು: ಸಚಿವ ಕೆ.ಜೆ ಜಾರ್ಜ್

ಉಡುಪಿ: ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್‌ಗೆ ಇಂದು ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬ್ಲೂ ಫ್ಲಾಗ್ ಬೀಚ್‌ನ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಸೇರಿದಂತೆ ಮತ್ತಿತರ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್‌ಗೆ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ವಾರದ ಕಡೆಯ ದಿನದಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು. ಸಾಮಾನ್ಯವಾಗಿ ಕರಾವಳಿ ಭಾಗದ ವಾತಾವರಣದ ತೇವಾಂಶದಲ್ಲಿ ಉಪ್ಪಿನ ಅಂಶವಿರುವ ಹಿನ್ನೆಲೆ, ವಿದ್ಯುತ್ ತಂತಿಗಳು ತುಕ್ಕು ಹಿಡಿದು ತುಂಡಾಗುತ್ತಿದ್ದು, ಬೀಚ್‌ನಲ್ಲಿ ನಿರಂತರ ವಿದ್ಯುತಚ್ಛಕ್ತಿ ಸರಬರಾಜಿಗೆ ತೊಂದರೆ ಉಂಟಾಗುತ್ತಿದೆ.

ಬ್ಲೂ ಫ್ಲಾಗ್ ಬೀಚ್ ರಸ್ತೆಯಲ್ಲಿರುವ ವಿದ್ಯುತ್ ತಂತಿಗಳಿಗೆ ಇನ್ಸುಲೇಟೆಡ್ ಕೇಬಲ್ ಅಳವಡಿಸಲು ಇಂಧನ ಇಲಾಖೆಯ ಮೂಲಕ ತಕ್ಷಣ ರೂ.50 ಲಕ್ಷ ಬಿಡುಗಡೆಗೊಳಿಸುತ್ತಿದ್ದು, ವಾರದೊಳಗೆ ಅಂದಾಜು ಪಟ್ಟಿ ತಯಾರಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ 66 ರಿಂದ ಪಡುಬಿದ್ರಿ ಬೀಚ್‌ಗೆ ಸಂಪರ್ಕ ಕಲ್ಪಿಸುವ ಸುಮಾರು ಮೂರು ಕಿ.ಮೀ. ರಸ್ತೆಯ ವಿಸ್ತರಣೆ, ಕಾಂಕ್ರೀಟ್ ಕಾಮಗಾರಿ ಹಾಗೂ ಎಂಡ್‌ಪಾಯಿoಟ್ ರಸ್ತೆಯ ಕಾಮಿನಿ ಹೊಳೆಯ ಹೂಳೆತ್ತುವಿಕೆ ಕಾಮಗಾರಿಗೆ ಸಂಬoಧಿಸಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಶೀಘ್ರ ಜಂಟಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೀಚ್‌ಗೆ ಹೊಂದಿಕೊoಡಿರುವ ಸರ್ಕಾರಿ ಜಾಗವನ್ನು ಕೆಲವು ಖಾಸಗಿಯವರು ಒತ್ತುವರಿ ಮಾಡಿರುವ ಬಗ್ಗೆ ಮೌಖಿಕ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕಂದಾಯ ಇಲಾಖಾ ಅಧಿಕಾರಿಗಳು ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಬೀಚ್‌ಗೆ ಪ್ರತಿದಿನ ಒಂದರಿoದ ಎರಡು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಬೀಚ್‌ನ ಸಮೀಪವಿರುವ ಸರಕಾರಿ ಅಥವಾ ಖಾಸಗಿ ಜಾಗ ಪಡೆದು ವಾಹನ ನಿಲುಗಡೆಗೆ ಸೂಕ್ತ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕಡಲ್ಕೊರೆತ ಸಮಸ್ಯೆಯಿಂದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಕಡಲ್ಕೊರೆತ ನಿಯಂತ್ರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬoಧಿಸಿದ ವಿಷಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಹೆಜಮಾಡಿ ಹಾಗೂ ಪಡುಬಿದ್ರಿಯ ಮಧ್ಯದ ಮುಟ್ಟಳಿವೆಗೆ ಬ್ರೇಕ್ ವಾಟರ್ ನಿರ್ಮಾಣ, ನಾದರಸ್ತಿಯಲ್ಲಿರುವ ಬೀಚ್ ಸಂಪರ್ಕದ ಸೇತುವೆಗೆ ಕಾಯಕಲ್ಪ, ಪಡುಬಿದ್ರಿ ಬ್ಲೂ ಫ್ಲಾö್ಯಗ್ ಬೀಚ್ ಬಳಿ ಬಾಕಿ ಇರುವ ಒಂದು ಕಿ.ಮೀ ಸಮುದ್ರ ತಡೆಗೋಡೆ, ಎಂಡ್‌ಪಾಯಿoಟ್ ದ್ವೀಪಕ್ಕೆ ತೂಗು ಸೇತುವೆ ನಿರ್ಮಿಸುವ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಸಂಬoಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ರಾಜ್ಯ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಮ್.ಎ.ಗಫೂರ್ ಸಚಿವರಿಗೆ ಬೀಚ್‌ನ ವಸ್ತುಸ್ಥಿತಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಸಚಿವರ ಗಮನಕ್ಕೆ ತಂದರು.

ಮೆಸ್ಕಾಂ ಚೇರ್‌ಮೆನ್ ಹರೀಶ್ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಮ್‌ಪ್ರಸಾತ್ ಮನೋಹರ್, ಎಡಿಸಿ ಅಬೀದ್ ಗಧ್ಯಾಳ, ಮೆಸ್ಕಾಂ ಎಮ್.ಡಿ ಹರೀಶ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯಾ, ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಮ್, ಬ್ಲೂ ಫ್ಲಾಗ್ ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.