ಉಡುಪಿ: ವೃದ್ಧಾಪ್ಯವು ಪ್ರಕೃತಿ ಸಹಜ ಪ್ರಕ್ರಿಯೆಯಾಗಿದ್ದು, ಹಿರಿಯ ನಾಗರಿಕರನ್ನು ಕಡೆಗಣಿಸದೇ ಅವರ ಸಂಧ್ಯಾ ಕಾಲದಲ್ಲಿ ಹೊಂದಾಣಿಕೆಯ ಜೀವನ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕಿ ಅಶ್ವಿನಿ ಹೇಳಿದರು.
ಅವರು ಇತ್ತೀಚೆಗೆ ಬಡಾನಿಡಿಯೂರು ಗ್ರಾಮ ಪಂಚಾಯತ್ನಲ್ಲಿ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಇವರ ವತಿಯಿಂದ ನಡೆದ ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಮಾತನಾಡಿದರು.
ಹಿರಿಯ ನಾಗರಿಕರು ತುರ್ತು ಸಂದರ್ಭದಲ್ಲಿ ದೂರವಾಣಿ ಸಂಖ್ಯೆ 0820-2526394 ಗೆ ಕರೆ ಮಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದ ಅವರು, ಹಿರಿಯರ ನಿರ್ವಹಣೆ, ಮಕ್ಕಳು, ವಾರೀಸುದಾರರು ಆರೈಕೆ ಮಾಡಿಕೊಳ್ಳದಿದ್ದಲ್ಲಿ ಎ.ಸಿ. ಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬಹುದು. ಹಿರಿಯ ನಾಗರಿಕರ ಗುರುತಿನ ಚೀಟಿ ಮತ್ತು ವೃದ್ಧಾಪ್ಯ ವೇತನಗಳ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯೆ ಯಶೋಧ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲತಿ, ಗ್ರಾಮ ಲೆಕ್ಕಿಗರಾದ ಪವಿತ್ರ, ಪಂಚಾಯತ್ ಸಿಬ್ಬಂದಿಗಳು, ವಿಕಲಚೇತನರ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜಕ ಮಧುಸೂಧನ ರಾವ್, ವಿಕಲಚೇತನ ಹಾಗೂ ಹಿರಿಯ ನಾಗರಿಕ ಫಲಾನುಭವಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು. ಕಾರ್ಯದರ್ಶಿ ಗುರುರಾಜ್ ಸ್ವಾಗತಿಸಿ, ವಂದಿಸಿದರು.