ಕಿನ್ನಿಗೋಳಿ: ಉಭಯ ಜಿಲ್ಲೆಗಳ ನೇಕಾರರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮ

ಕಿನ್ನಿಗೋಳಿ: ದ.ಕ. ಮತ್ತು ಉಡುಪಿ ಜಿಲ್ಲೆಗಳ ನೇಕಾರರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವು ಜ.5 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಹಕಾರಿ ಸಂಘದಲ್ಲಿ ನಡೆಯಿತು.

ಉಡುಪಿ ಸೀರೆ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವೀವರ್ಸ್ ಸರ್ವಿಸ್ ಸೆಂಟರ್ ನ ಉಪ ನಿರ್ದೇಶಕ ಮಾರಿಮುತ್ತು ಮತ್ತು ತಾಂತ್ರಿಕ ವಿಭಾಗದ ಅಧಿಕಾರಿ ಮೋಹನ್ ಕುಮಾರ್, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಭಯ ಜಿಲ್ಲೆಗಳ ಉಪ ನಿರ್ದೇಶಕ ಶಿವ ಶಂಕರ್ ಮತ್ತು ಉಡುಪಿ, ದ.ಕ ಜಿಲ್ಲೆಗಳ ನೇಕಾರ ಸಂಘದ ನೇಕಾರರು ಮತ್ತು ಆಡಳಿತಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಯೋಜನೆಗಳಾದ ಸಮರ್ಥ್ ತರಬೇತಿ, ಪೆಹಚಾನ್ ಕಾರ್ಡ್ , ಮುದ್ರಾ ಸಾಲ ಸೌಲಭ್ಯ , ವಿದ್ಯಾರ್ಥಿ ವೇತನ, ವಿಮೆ, ಭವಿಷ್ಯ ನಿಧಿ ಬಗ್ಗೆ ವೀವರ್ ಸರ್ವಿಸ್ ಸೆಂಟರ್ ನ ಅಧಿಕಾರಿಗಳು ನೇಕಾರರಿಗೆ ಮಾಹಿತಿ ನೀಡಿದರು. ರಾಜ್ಯ ಕೈಮಗ್ಗ ಇಲಾಖೆಯ ಯೋಜನೆಗಳಾದ ನೇಕಾರ ಸಮ್ಮಾನ, ಆರೋಗ್ಯ ವಿಮೆ, ರಿಬೇಟ್ ಯೋಜನೆ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಕಾರರ ಉಳಿತಾಯ ಹಣ, ಥ್ರಿಫ್ಟ್ ಫಂಡ್ ನ ಹೆಚ್ಚಿನ ಅಂಶ ಬಿಡುಗಡೆ ಆಗಿರುವ ಬಗ್ಗೆ ಕೈಮಗ್ಗ ಇಲಾಖೆ ಅಧಿಕಾರಿ ವಿವರಿಸಿದರು.

ಉಭಯ ಜಿಲ್ಲೆಗಳ ಸಕ್ರಿಯ ನೇಕಾರರಲ್ಲಿ ಹೆಚ್ಚಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ನಂತರ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಕೆಲವೊಂದು ಸವಲತ್ತುಗಳು ಸಿಗದ ನೇಕಾರರು ಸಮಸ್ಯೆಯ ಬಗ್ಗೆ ಚರ್ಚಿಸಿ ಸರಿಪಡಿಸುವ ಬಗ್ಗೆ ತಿಳಿದುಕೊಂಡರು. ವೀವರ್ಸ್ ಸರ್ವಿಸ್ ಸೆಂಟರ್ ಮೂಲಕ ದ. ಕ. ಮತ್ತು ಉಡುಪಿ ಜಿಲ್ಲೆಯ 57 ನೇಕಾರರಿಗೆ ಮಗ್ಗದ ಪರಿಕರಗಳು, 35 ನೇಕಾರರಿಗೆ ಸೌರ ಬೆಳಕಿನ ವ್ಯವಸ್ಥೆ ಮತ್ತು ಉಡುಪಿ ಜಿಲ್ಲೆಯ ಒಬ್ಬ ನೇಕಾರರಿಗೆ ಮಗ್ಗದ ಕೊಠಡಿಗಳನ್ನು ಡಬ್ಲೂ.ಎಸ್.ಸಿ ಮತ್ತು ಕೈ ಮಗ್ಗ ಇಲಾಖೆಯ ಜೊತೆಗೆ ಸಂವಹನ ಸಾಧಿಸಿ ಕದಿಕೆ ಟ್ರಸ್ಟ್ ದೊರಕಿಸಿ ಕೊಟ್ಟಿದೆ. ಕದಿಕೆ ಟ್ರಸ್ಟ್ ನ ಮೂಲಕ ಪಡೆದ ಜಿಐ ಟ್ಯಾಗ್ ನ ಅಧಿಕೃತ ಬಳಕೆದಾರ ಮಾನ್ಯತೆಯ ಸರ್ಟಿಫಿಕೇಟ್ ಗಳನ್ನು ಪಡು ಪಣಂಬೂರು, ಉಡುಪಿ, ಶಿವಳ್ಳಿ ಮತ್ತು ಬ್ರಹ್ಮಾವರ ಸಂಘಗಳಿಗೆ ವಿತರಿಸಲಾಯಿತು. ಈ ಸರ್ಟಿಫಿಕೇಟ್ ಪಡೆಯುವಲ್ಲಿ ಸಹಕಾರ ನೀಡಿದ ಚೆನ್ನೈ ನ ಜಿಐ ಕಚೇರಿಯ ಪ್ರಶಾಂತ್ ಕುಮಾರ್ ಮತ್ತು ವಿಟಿಪಿಸಿ, ಬೆಂಗಳೂರು ಕಚೇರಿಯ ಪ್ರಭಾವತಿ ರಾವ್ ಅವರಿಗೆ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಧನ್ಯವಾದ ತಿಳಿಸಿದರು.

ಸಭೆಯಲ್ಲಿ ಉಡುಪಿ, ಬ್ರಹ್ಮಾವರ, ಶಿವಳ್ಳಿ , ಪಡು ಪಣಂಬೂರು ಮತ್ತು ತಾಳಿಪಾಡಿ ನೇಕಾರರ ಸಂಘದ ನೇಕಾರರು ಮತ್ತು ಆಡಳಿತಧಿಕಾರಿಗಳು ಮತ್ತು ಕದಿಕೆ ಟ್ರಸ್ಟ್ ನ ಟ್ರಸ್ಟಿಗಳು ಭಾಗವಸಿದ್ದರು.