ನೊಯ್ಡಾ: ಬೀದಿನಾಯಿ ಹಾವಳಿಗೆ ಏಳು ತಿಂಗಳ ಕಂದಮ್ಮ ಬಲಿ

ನೊಯ್ಡಾ: ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 100 ರ ಬಹುಮಹಡಿ ಕಟ್ಟಡದ ಸೊಸೈಟಿಯಲ್ಲಿ ಸೋಮವಾರ ಸಂಜೆ ಕಾರ್ಮಿಕನೊಬ್ಬನ ಏಳು ತಿಂಗಳ ಮಗುವನ್ನು ಬೀದಿನಾಯಿಯೊಂದು ಕೊಂದು ಹಾಕಿದೆ. ಅಂಬೆಗಾಲಿಡುತ್ತಿದ್ದ ಗಾಯಾಳು ಮಗುವನ್ನು ಐಸಿಯುಗೆ ದಾಖಲಿಸಲಾಗಿತ್ತು. ನಾಯಿ ದಾಳಿಯಲ್ಲಿ ಮಗುವಿನ ಕರುಳು ಹೊರಬಂದಿದ್ದು, ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ದುರದೃಷ್ಟವಶಾತ್ ಅದು ಯಶಸ್ವಿಯಾಗಲಿಲ್ಲ. ರಾತ್ರಿಯಿಡೀ ಚಿಂತಾಜನಕ ಸ್ಥಿತಿಯಲ್ಲಿದ್ದ ಮಗು ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಸೆಕ್ಟರ್ 100 ರಲ್ಲಿರುವ ಲೋಟಸ್ ಬೌಲೆವಾರ್ಡ್ ಎಂಬ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ.

ಸೊಸೈಟಿ ನಿವಾಸಿಯೊಬ್ಬರ ಪ್ರಕಾರ, ಸೊಸೈಟಿಯ ನೆಲಮಾಳಿಗೆಯಲ್ಲಿ ಅನೇಕ ಬೀದಿ ನಾಯಿಗಳು ವಾಸಿಸುತ್ತಿವೆ. ಅವರಿಗೆ ಸೊಸೈಟಿ ಒಳಗೂ ಆಹಾರ ನೀಡಲಾಗುತ್ತಿದೆ. ಸೊಸೈಟಿಯಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇದರಿಂದಾಗಿ ಕಾರ್ಮಿಕನು ತನ್ನ 7 ತಿಂಗಳ ಮಗುವಿನೊಂದಿಗೆ ಇಲ್ಲಿ ವಾಸಿಸುತ್ತಿದ್ದನು. ಇದಕ್ಕೂ ಮೊದಲು ಹಲವಾರು ಬಾರಿ ನಾಯಿ ದಾಳಿ ನಡೆದಿದೆ. ಈ ಬಗ್ಗೆ ನೋಯ್ಡಾ ಪ್ರಾಧಿಕಾರ ಮತ್ತು ಎಒಎಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿ ಹೇಳಿದ್ದಾರೆ.

ಸೊಸೈಟಿಯೊಳಗೆ ನಾಯಿ ಹಿಡಿಯುವವರು ಬಂದಾಗ ಇಲ್ಲಿನ ನಿವಾಸಿಗಳು ಅವರನ್ನು ಹಿಂದೆ ಕಳುಹಿಸುತ್ತಿದ್ದರು ಎನ್ನುವ ಆರೋಪಗಳು ಕೂಡಾ ಕೇಳಿ ಬರುತ್ತಿವೆ.

ಮಗುವಿನ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮಗುವಿನ ಪೋಷಕರು ಪಾರ್ಥಿವ ಶರೀರದೊಂದಿಗೆ ಮಧ್ಯಪ್ರದೇಶದ ಸಿಂಗ್ರೌಲಿಗೆ ತೆರಳಿದ್ದು, ಅಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಸಂತ್ರಸ್ತೆಯ ತಾಯಿಯ ಸಂಬಂಧಿ ಸಿಂಗ್ರೌಲಿಯಲ್ಲಿ ವಾಸವಾಗಿದ್ದಾರೆ. ನೋಯ್ಡಾ ಸೆಕ್ಟರ್ 39 ಪೊಲೀಸ್ ಠಾಣೆ ಈ ಬಗ್ಗೆ ತನಿಖೆ ನಡೆಸುತ್ತಿದೆ.