ಸ್ವಾತಂತ್ರ್ಯ ದಿನವೆಂದರೆ ಬಾಲ್ಯ ನೆನಪಾಗುತ್ತದೆ: ಈಗಲೂ ಕಾಡುವ ಆ ಸಂಭ್ರಮದ ಕ್ಷಣಗಳು:

-ಪ್ರಗತಿ ಎಸ್.

ಸ್ವಾತಂತ್ರ್ಯ ದಿನಾಚರಣೆ ಬೆಳಿಗ್ಗೆಯಂತು ಎಲ್ಲರ ಮುಖದಲ್ಲೂ ಎಲ್ಲಿಲ್ಲದ ಸಂಭ್ರಮವೂ ಸಂಭ್ರಮ. ಸಮವಸ್ತ್ರ ಬೂಟ್ ಧರಿಸಿ ಕೈಯಲ್ಲಿ ಒಂದು ಬಾವುಟ ಹಿಡಿದು ನಡೆಯುತ್ತಿದ್ದೆವು ಶಾಲೆಯ ಕಡೆಗೆ. ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದೆ.ಆದರೂ ಸ್ವಾತಂತ್ರ್ಯ ದಿನಾಚರಣೆ ಎಂದಾಗ ನೆನಪಾಗುವುದು ನನ್ನ ಬಾಲ್ಯದ ಶಾಲಾ ದಿನಗಳು. ಆ ದಿನಗಳಲ್ಲಿ ನಾನು ಪಟ್ಟ ಖುಷಿಗೆ ಕೊನೆಯೇ ಇರುತ್ತಿರಲಿಲ್ಲ. ಅಗಸ್ಟ್ ತಿಂಗಳ ಮೊದಲ ದಿನದಿಂದಲೇ ಶುರುವಾಗುವ ನಮ್ಮ ತಯಾರಿಗಳು ಆಗಸ್ಟ್ 15 ಬಂದರೂ ಮುಗಿಯುತ್ತಿರಲಿಲ್ಲ. ಅಗಸ್ಟ್ 15 ಎಂದಾಗ ಹುಡುಗಿಯರಿಗೆ ಥಟ್ ಎಂದು ಮನದಲ್ಲಿ ಹಾದು ಹೋಗುವ ಒಂದು ವಿಷಯವೆಂದರೆ ಕೇಸರಿ,ಬಿಳಿ ಮತ್ತು ಹಸಿರು ಬಣ್ಣದ ಬಳೆಗಳು. ಎಲ್ಲಾ ಹುಡುಗಿಯರ ಕೈಗಳಲ್ಲಿ ಎರಡು ಮೂರು ಡಜನ್ ಬಳೆಗಳನ್ನ ನೋಡುವ ಕಣ್ಣಿಗೆ ಹಬ್ಬವೇ ಸರಿ.

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವೇ ಹಾಕುವ ಬಳೆಯಿಂದ ಹಿಡಿದು ಮಾಡುವ ನೃತ್ಯ, ಭಾಷಣ ಮತ್ತು ಸಂಗೀತದವರೆಗೂ ಭರ್ಜರಿ ತಯಾರಿಯಂತೂ ನಡೆದಿರುತ್ತದೆ. ನನಗಂತೂ ನಾಳೆ ಬೆಳಿಗ್ಗೆ ಯಾವಾಗ ಆಗುತ್ತದೋ ಎನ್ನುವ ಕಾತುರವೇ ಹೆಚ್ಚಿರುತ್ತಿತ್ತು.

ಇದೆಲ್ಲವೂ ನನ್ನ ಬಾಲ್ಯದಲ್ಲಿ ನಾನು ಕಂಡಂತಹ ಸ್ವಾತಂತ್ರ್ಯೋತ್ಸವದ ರಸಭರಿತ ಅನುಭವ. ಆದರೆ ಇಂದಿನ ಮಕ್ಕಳಲ್ಲಿ ಇಂತಹ ಅನುಭವಗಳು ತೀರಾ ಕಡಿಮೆಯಾಗುತ್ತಿದೆ. ಇಂದಿನ ಮಕ್ಕಳಲ್ಲಿ ಇವಾಗಿಂದಲೇ ನಾವು ದೇಶ ಭಕ್ತಿಯನ್ನ ಹೆಚ್ಚಿಸಬೇಕು. ಇಂದಿನ ಪುಟಾಣಿ ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರದೆ ಇಂತಹ ರಾಷ್ಟ್ರೀಯ ಹಬ್ಬಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ದೇಶ ಭಕ್ತಿ ಎನ್ನುವುದು ಬರೀ ಒಂದು ದಿನಕ್ಕೆ ಸೀಮಿತವಾಗಿರದೇ ಪ್ರತೀ ಕ್ಷಣ ನಮ್ಮ ಮನದಲ್ಲಿ ಗಟ್ಟಿಯಾಗಿರಬೇಕು.