ಮಲಾಡ್ ಕನ್ನಡ ಸಂಘದ ವತಿಯಿಂದ ಒಳಾಂಗಣ ಕ್ರೀಡಾ ಸ್ಪರ್ಧೆ

ಮಲಾಡ್: ಯುವಕರಲ್ಲಿ ಸಂಘದ ಕಾರ್ಯ ಚಟುವಟಿಕೆಯ ಜೊತೆಗೆ ಕ್ರೀಡಾಸಕ್ತಿ ಬೆಳೆಯಬೇಕೆಂಬ ಉದ್ದೇಶದಿಂದ ಮಲಾಡ್ ಕನ್ನಡ ಸಂಘವು ಪ್ರತಿವರ್ಷ ಸಂಘದ ಸದಸ್ಯರ ಮಕ್ಕಳಿಗೆ ಮತ್ತು ಯುವಕರಿಗೆ ಒಳಾಂಗಣ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಕ್ರೀಡೆ ಮನಸ್ಸನ್ನು ಕ್ರಿಯಾಶೀಲಗೊಳಿಸುವ ಮೂಲಕ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸ್ಫೂರ್ತಿಯಾಗಿದೆ ಎಂದು ಮಲಾಡ್ ಕನ್ನಡ ಸಂಘದ ಅಧ್ಯಕ್ಷ ನ್ಯಾಯವಾದಿ ಜಗದೀಶ್ ಎಸ್ ಹೆಗ್ಡೆ ಅಭಿಪ್ರಾಯಪಟ್ಟರು.

ಡಿ. 10 ರಂದು ಮಲಾಡ್ ಮಾರ್ವೆ ರೋಡ್ ನ ಯುನಿಟಿ ಅಪಾರ್ಟ್ಮೆಂಟ್ ನ ಸಂಘದ ಕಚೇರಿಯ ರಮಾನಾಥ ಎಸ್ ಪಯ್ಯಡೆ ಸ್ಮಾರಕ ಸಭಾಂಗಣದಲ್ಲಿ ಸಂಘವು ಆಯೋಜಿಸಿದ್ದ ಒಳಾಂಗಣ ಕ್ರೀಡಾ ಸ್ಫರ್ಧಾ ವಿಜೇತರ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಬದುಕಿನಲ್ಲಿ ಕ್ರೀಡೆ ಅನಿವಾರ್ಯವಾಗಿದ್ದು ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸಲಿದೆ. ಇಂದಿನ ಕಾರ್ಯಕ್ರಮದಲ್ಲಿ ಬಹುಸಂಖ್ಯೆಯಲ್ಲಿ ಯುವ ಸದಸ್ಯರು, ಮಕ್ಕಳು ನೀಡಿದ ಬೆಂಬಲ ಸಂಘದ ಭವಿಷ್ಯದ ಕಾರ್ಯ ಚಟುವಟಿಗಳಿಗೆ ಪ್ರೋತ್ಸಾಹ ದೊರಕಿದಂತಾಗಿದೆ ಎಂದು ಬಹುಮಾನ ಪಡೆದ ಸ್ಪರ್ಧಿಗಳನ್ನು ಅಭಿನಂದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಆಶಾಲತಾ ಎಸ್ ಕೋಟ್ಯಾನ್, ಸಂಘದಲ್ಲಿ ಯುವಶಕ್ತಿಯನ್ನು ಪ್ರೋತ್ಸಾಹಿಸಿ ಕ್ರೀಡಾ ಆಯೋಜನೆ ಮೂಲಕ ಅವರನ್ನು ಧನಾತ್ಮಕವಾಗಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು ಇಂದಿನ ಕಾರ್ಯಕ್ರಮಕ್ಕೆ ಮಕ್ಕಳ ಪಾಲಕರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದಾರೆ ಎಂದರು.

ಒಳಾಂಗಣ ಸ್ಪರ್ಧೆಯಲ್ಲಿ ವಯೋಮಿತಿಯ ಅನುಗುಣವಾಗಿ ಯುವಕ ಯುವತಿಯರು, ಮಕ್ಕಳಿಗೆ ಮತ್ತು ಹಿರಿಯರಿಗೆ ಕೇರಂ, ಚೆಸ್ ಮತ್ತು ತುಳುನಾಡಿನ ಪಾರಂಪರಿಕ ಕ್ರೀಡೆ ಚೆನ್ನದ ಮಣೆ ಪಂದ್ಯವನ್ನು ಆಯೋಜಿಸಲಾಗಿತ್ತು.

ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ಗೆದ್ದವರಿಗೆ ಫಲಕ, ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.

ಜತೆ ಕಾರ್ಯದರ್ಶಿ ಜಯಪ್ರಕಾಶ್ ಸಾಲ್ಯಾನ್, ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷ ಸೂರಪ್ಪ ಕುಂದರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತ ವಿ ಭಂಡಾರಿ, ಉಪಕಾರ್ಯಾಧ್ಯಕ್ಷೆ ಸಾರಿಕಾ ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಶಾರದಾ ಪೂಜಾರಿ, ಕೋಶಾಧಿಕಾರಿ ವಿಜಯಾ ಎಸ್ ಪೂಜಾರಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಕೇಶ್ ಜಿ ಪೂಜಾರಿ, ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಚಿತ್ರ, ವರದಿ: ರಮೇಶ್ ಉದ್ಯಾವರ.