ಮಂಗಳೂರು: ಭಾರತದ 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ದೇಶದ ಪ್ರತಿ ಮನೆ, ಮಠ, ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಎನ್ನುವ ಬೇಧವಿಲ್ಲದೆ ಎಲ್ಲೆಡೆಯೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.
ಮಂಗಳೂರಿನ ಬಹು ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಂಗಳದಲ್ಲಿ ಕ್ಷೇತ್ರದ ಮತ್ತು ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ 900 ಕೆ.ಜಿ ಧವಸ-ಧಾನ್ಯದಿಂದ ಸುಂದರವಾದ ತ್ರಿವರ್ಣ ಧ್ವಜವನ್ನು ರಚಿಸಲಾಗಿದ್ದು, ಜನರ ಆಕರ್ಷಣೆಯ ಕೇಂದ್ರವಾಗಿದೆ. ವಿಧ-ವಿಧದ ಧವಸ ಮತ್ತು ಧಾನ್ಯಗಳನ್ನು ಬಳಸಿಕೊಂಡು ತಿರಂಗಾವನ್ನು ರಚಿಸಲಾಗಿದೆ. ಈ ವಿನೂತನ ರಾಷ್ಟ್ರಧ್ವಜವು ವೀಕ್ಷಕರ ವೀಕ್ಷಣೆಗೆ ಲಭ್ಯವಿದೆ.












