ದೇಶದ ಮೊದಲ ಖಾಸಗಿ ರಾಕೆಟ್ ಉಡಾಯಿಸಿದ ಇಸ್ರೋ: ಯಶಸ್ಸನ್ನು ಪ್ರಧಾನಿ ಮೋದಿಗೆ ಅರ್ಪಿಸಿದ ಸ್ಕೈರೂಟ್ ಸಂಸ್ಥೆ

ನವದೆಹಲಿ: ದೇಶದ ಮೊದಲ ಖಾಸಗಿ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್-ಎಸ್ ಹೆಸರಿನ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡಲಾಗಿದೆ.

ಇಸ್ರೋದ ಈ ಸಾಧನೆಗಾಗಿ ಪ್ರಧಾನಿ ಮೋದಿ ಅಭಿನಂದಿಸಿದ್ದು, “ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್-ಎಸ್ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿರುವುದು ಭಾರತಕ್ಕೆ ಐತಿಹಾಸಿಕ ಕ್ಷಣ! ಇದು ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮದ ಪಯಣದಲ್ಲಿ ಪ್ರಮುಖ ಮೈಲಿಗಲ್ಲು. ಇಸ್ರೋ ಮತ್ತು ಇನ್ ಸ್ಪೇಸ್ ಇಂಡಿಯಾಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.

ಅತ್ತ ಸ್ಕೈರೂಟ್ ಸಂಸ್ಥೆಯೂ ಕೂಡಾ ಭಾರತ ಸರಕಾರ ಮತ್ತು ಇಸ್ರೋ ಬೆಂಬಲಕ್ಕಾಗಿ ಧನ್ಯವಾದಗಳನ್ನು ಹೇಳಿದೆ. “ಟೀಮ್ ಸ್ಕೈರೂಟ್ ಭಾರತದ ಮೊದಲ ಖಾಸಗಿ ರಾಕೆಟ್ ಉಡಾವಣೆಯ ಇಂದಿನ ಐತಿಹಾಸಿಕ ಯಶಸ್ಸನ್ನು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಒಡಗೂಡಿದ ಬಾಹ್ಯಾಕಾಶ ಸುಧಾರಣೆಗಳಿಗೆ ಅರ್ಪಿಸುತ್ತದೆ. ಈ ಮೈಲಿಗಲ್ಲಿನ ಹೆಗ್ಗುರುತಿನೆಡೆಗಿನ ಅಮೂಲ್ಯ ಬೆಂಬಲಕ್ಕಾಗಿ ಇಸ್ರೋ ಮತ್ತು ಇನ್ ಸ್ಪೇಸ್ ಇಂಡಿಯಾ ಗೆ ಧ್ಯನವಾದಗಳು” ಎಂದು ಅದು ಟ್ವೀಟ್ ಮಾಡಿದೆ.

ಸ್ಕೈರೂಟ್ ಏರೋಸ್ಪೇಸ್‌ ತೆಲಂಗಾಣ ಮೂಲದ ಟೆಕ್ ಸ್ಟಾರ್ಟ್‌ಅಪ್ ಕಂಪನಿಯಾಗಿದೆ. ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯುತ್ತಿದ್ದು ಭೂಮಿಯ ಕಕ್ಷೆಗೆ ಸೇರಿಸಲಿದೆ. ವಿಕ್ರಮ್-ಎಸ್ ಉಡಾವಣಾ ವಾಹನದಲ್ಲಿ ಬಳಸಲಾದ ಎಂಜಿನ್‌ಗೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಹೆಸರನ್ನು ಇಡಲಾಗಿದೆ.