ನವದೆಹಲಿ: ಸರಕು ಮತ್ತು ಸೇವೆಗಳು ಸೇರಿದಂತೆ ದೇಶದ ಒಟ್ಟಾರೆ ರಫ್ತುಗಳು ಕಳೆದ ತಿಂಗಳು ಬೆಳವಣಿಗೆಯನ್ನು ದಾಖಲಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತುಗಳು ಶೇಕಡಾ 11.51 ರಷ್ಟು ಬೆಳವಣಿಗೆಯನ್ನು ಪದರ್ಶಿಸಿವೆ ಮತ್ತು 61.18 ಬಿಲಿಯನ್ ಯುಎಸ್ ಡಾಲರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಆಮದುಗಳು ಶೇ 42.90 ರಷ್ಟು ಬೆಳವಣಿಗೆಯನ್ನು ಪ್ರದರ್ಶಿಸಿವೆ. ಕಳೆದ ತಿಂಗಳಲ್ಲಿ ದೇಶದ ಆಮದು 82.22 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ.
ಕಳೆದ ಏಪ್ರಿಲ್-ಜುಲೈ ತ್ರೈಮಾಸಿಕದಲ್ಲಿ ಸರಕು ಮತ್ತು ಸೇವೆಗಳು ಸೇರಿದಂತೆ ದೇಶದ ಒಟ್ಟಾರೆ ರಫ್ತು 253.84 ಶತಕೋಟಿ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ ಮತ್ತು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 22.85 ರಷ್ಟು ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಜುಲೈ 2021 ರಲ್ಲಿ ಭಾರತದ ರಫ್ತು 54.87 ಬಿಲಿಯನ್ ಯುಎಸ್ ಡಾಲರ್ ಮತ್ತು ಆಮದು 57.54 ಬಿಲಿಯನ್ ಯುಎಸ್ ಡಾಲರ್ ಎಂದು ಸಚಿವಾಲಯ ಹೇಳಿದೆ.
ಸರಕು ರಫ್ತು 36.27 ಬಿಲಿಯನ್ ಯುಎಸ್ ಡಾಲರ್ ಹಾಗೂ ಜುಲೈ 2022 ರ ಸೇವಾ ರಫ್ತಿನ ಅಂದಾಜು ಮೌಲ್ಯವು 24.91 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಕಾಫಿ, ಅಕ್ಕಿ, ಪೆಟ್ರೋಲಿಯಂ ಉತ್ಪನ್ನಗಳು, ಚರ್ಮ ಮತ್ತು ಚರ್ಮದ ಉತ್ಪನ್ನಗಳು ರಫ್ತಿನಲ್ಲಿ ಬೆಳವಣಿಗೆ ದಾಖಲಿಸಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

















