ಚೆನ್ನೈ (ತಮಿಳುನಾಡು) : ಫಿಡೆ ವಿಶ್ವಕಪ್ ಚೆಸ್ ಚಾಂಪಿಯನ್‌ಶಿಪ್ ಟೂರ್ನಿಯ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಮಿಳುನಾಡಿನ ಆಟಗಾರ ಆರ್.ಪ್ರಜ್ಞಾನಂದ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಪ್ರೋತ್ಸಾಹ ಹಾಗೂ ಬೆಂಬಲ ನೀಡಿದ ಎಲ್ಲರಿಗೂ, ಅದ್ರಲ್ಲೂ ವಿಶೇಷವಾಗಿ ತಾಯಿ ಆರ್.ನಾಗಲಕ್ಷ್ಮಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.”ನಾನು ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೇನೆ. ಮುಂದಿನ ವರ್ಷದ ಸ್ಪರ್ಧೆಗೆ ಅರ್ಹತೆ ಪಡೆದಿದ್ದೇನೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳಿಗಾಗಿ ನಾನು ಕೃತಜ್ಞ. ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ವಿಶೇಷವಾಗಿ, ನನ್ನ ಬೆಂಬಲಕ್ಕೆ ನಿಂತ ಹೆಮ್ಮೆಯ ತಾಯಿಗೆ ಧನ್ಯವಾದ ಹೇಳಬಯಸುತ್ತೇನೆ” ಎಂದು ಬರೆದಿದ್ದಾರೆ.ಅಜರ್‌ಬೈಜಾನ್‌ನ ಬಾಕು ಎಂಬಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ FIDE ವಿಶ್ವಕಪ್ ಚೆಸ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆದ ಭಾರತದ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ಬಾಬು ಪ್ರಜ್ಞಾನಂದ ಅವರು ತನಗೆ ವಿಶೇಷವಾಗಿ ಬೆಂಬಲ ನೀಡಿದ ತಾಯಿಯನ್ನು ಸ್ಮರಿಸಿದ್ದಾರೆ.
ಚೆಸ್ ಒಲಿಂಪಿಯಾಡ್ 2024 ರ ಬಗ್ಗೆ ಮಾತನಾಡಿದ ಪ್ರಜ್ಞಾನಂದ, “ಈ ವಿಶ್ವಕಪ್ಗೆ ಇನ್ನೂ ಸಾಕಷ್ಟು ಸಮಯವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಂದ್ಯಾವಳಿಗಳು ನಡೆಯಲಿವೆ. ಸದ್ಯ ಆ ಬಗ್ಗೆ ಯೋಚನೆ ಮಾಡಬೇಕಿದೆ” ಎಂದರು.
FIDE ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ: 2023ರ FIDE ವಿಶ್ವಕಪ್ನಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಜ್ಞಾನಂದ ಅವರಿಗೆ ಪ್ರತಿಷ್ಟಿತ ಫಿಡೆ ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಸಿಕ್ಕಿದೆ. 2024ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಎಂಟು ಆಟಗಾರರ ಚೆಸ್ ಪಂದ್ಯಾವಳಿಯಾಗಿದ್ದು, 2024ರ ಏಪ್ರಿಲ್ 2 ರಿಂದ ಏಪ್ರಿಲ್ 25 ರವರೆಗೆ ಕೆನಡಾದ ಟೊರೊಂಟೊದಲ್ಲಿ ನಡೆಯಲಿದೆ. (ಎಎನ್ಐ)ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಅವರನ್ನು ಸೋಲಿಸಿ ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯ ಎರಡು ದಿನಕ್ಕೂ ಹೆಚ್ಚು ಕಾಲ ನಡೆದಿದ್ದು, ಎರಡೂ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದರಿಂದ ಟ್ರೈ ಬ್ರೇಕರ್ ಪಂದ್ಯ ನಡೆಸಲಾಯಿತು. ಟ್ರೈಬೇಕರ್ನಲ್ಲಿ ಪ್ರಜ್ಞಾನಂದ ವೀರೋಚಿತ ಸೋಲು ಕಂಡರು. ಅಂತಿಮವಾಗಿ, 0.5- 1.5 ಅಂಕಗಳಿಂದ ಕಾರ್ಲಸನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆದರೆ, 18ರ ಹುಡುಗ ಪ್ರಜ್ಞಾನಂದ ವಿಶ್ವದ ಚೆಸ್ಪಟುಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು.