ಕೌಲಾಲಂಪುರ್/ಸ್ಯಾಂಟಿಯಾಗೊ: ಮಲೇಷ್ಯಾದಲ್ಲಿ ನಡೆಯುತ್ತಿರುವ ಪುರುಷರ ಜೂನಿಯರ್ ಹಾಕಿ ವಿಶ್ವಕಪ್-2023ರಲ್ಲಿ ಭಾರತ ತಂಡ ಗೆಲುವಿನ ಶುಭಾರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ಫಾರ್ವರ್ಡ್ ಆಟಗಾರ ಅರೈಜೀತ್ ಸಿಂಗ್ ಹುಂಡಾಲ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತದ ಜೂನಿಯರ್ ಪುರುಷರ ಹಾಕಿ ತಂಡವು ಏಷ್ಯಾ ತಂಡವಾದ ಕೊರಿಯಾವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿತು.
ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲುವು ಸಾಧಿಸಿವೆ. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಪುರುಷರ ಪಂದ್ಯಾವಳಿಯಲ್ಲಿ ಭಾರತ ತಂಡ ಕೊರಿಯಾವನ್ನು 4-2 ರಲ್ಲಿ ಸೋಲಿಸಿದರೆ, ಚಿಲಿಯ ಸ್ಯಾಂಟಿಯಾಗೋದಲ್ಲಿ ನಡೆದ ಪಂದ್ಯದಲ್ಲಿ ಮಹಿಳಾ ಹಾಕಿ ಪಡೆ ನ್ಯೂಜಿಲ್ಯಾಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ರಲ್ಲಿ ಗೆಲುವು ಸಾಧಿಸಿತು.ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲುವು ಸಾಧಿಸಿವೆ.
ಪಂದ್ಯದ ಆರಂಭದಲ್ಲಿ ಇತ್ತಂಡಗಳು ಸಮಬಲವಾಗಿ ಆಟ ಆರಂಭಿಸಿದವು. 11ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಅರೈಜೀತ್ ಅದ್ಭುತವಾಗಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿ 1-0 ಮುನ್ನಡೆ ನೀಡಿದರು. 5 ನಿಮಿಷದ ಅಂತರದಲ್ಲಿ ಅರೈಜೀತ್ ಮತ್ತೊಂದು ಗೋಲು ಗಳಿಸಿ ಅಂತರ 2-0 ಗೆ ಹೆಚ್ಚಿಸಿದರು. ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಅಮನ್ದೀಪ್ರ ಪ್ರಯತ್ನದಿಂದ ಮತ್ತೊಂದು ಗೋಲು ದಾಖಲಾಗಿ 3-0 ಮುನ್ನಡೆ ಸಿಕ್ಕಿತು.ದ್ವಿತೀಯಾರ್ಧದಲ್ಲಿ ಕೊರಿಯಾ ಸುಧಾರಿತ ದಾಳಿ ನಡೆಸಿತು. ಡೊಹ್ಯುನ್ ಲಿಮ್ 38ನೇ ನಿಮಿಷದಲ್ಲಿ ಗೋಲು ಬಾರಿಸಿ 3-1 ಅಂತರಕ್ಕೆ ತಂದರು. ಪಂದ್ಯದ 41 ನೇ ನಿಮಿಷದಲ್ಲಿ ಅರೈಜಿತ್ ಮತ್ತೊಂದು ಗೋಲು ಹಾಕಿ ಹ್ಯಾಟ್ರಿಕ್ ಸಾಧಿಸಿದರು. 45 ನೇ ನಿಮಿಷದಲ್ಲಿ ಮಿಂಕ್ವಾನ್ ಕಿಮ್ ಗೋಲು ಗಳಿಸಿದರು. ಇದರಿಂದ ಪಂದ್ಯ 4-2 ರಲ್ಲಿ ಮುಕ್ತಾಯ ಕಂಡಿತು. ಗುರುವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ ಸೆಣಸಲಿದೆ.
ಅರೈಜೀತ್ ಸಿಂಗ್ ಹ್ಯಾಟ್ರಿಕ್: ಅರೈಜೀತ್ 11, 16, 41ನೇ ನಿಮಿಷದಲ್ಲಿ ಮೂರು ಬಾರಿ ಗೋಲು ಹೊಡೆದರೆ, ಅಮನ್ದೀಪ್ 30ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಕೊರಿಯಾ ಪರವಾಗಿ ಡೊಹ್ಯುನ್ ಲಿಮ್ 38ನೇ, ಮಿಂಕ್ವಾನ್ ಕಿಮ್ 45 ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಮಹಿಳಾ ತಂಡಕ್ಕೆ ಮೊದಲ ಗೆಲುವು: ಇತ್ತ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯುತ್ತಿರುವ ಎಫ್‌ಐಎಚ್ ಹಾಕಿ ಮಹಿಳಾ ಜೂನಿಯರ್ ವಿಶ್ವಕಪ್- 2023 ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತ ಮಹಿಳಾ ಹಾಕಿ ತಂಡ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಗೆಲುವಿನ ಸಿಹಿ ಅನುಭವಿಸಿತು.
ಶೂಟೌಟ್‌ನಲ್ಲಿ ಭಾರತೀಯ ಮಹಿಳೆಯರು ಆರಂಭಿಕ ಎರಡು ಹೊಡೆತಗಳನ್ನು ಕೈಚೆಲ್ಲಿದರು. ಆದರೆ, ತಂಡದ ಗೋಲ್‌ಕೀಪರ್ ಮಾಧುರಿ ಕಿಂಡೋ ನಾಲ್ಕು ಬ್ಯಾಕ್ ಟು ಬ್ಯಾಕ್ ಗೋಲುಗಳನ್ನು ತಡೆಯುವ ಮೂಲಕ ತಂಡವು ಪುಟಿದೇಳುವಂತೆ ಮಾಡಿದರು. ಕೊನೆಯಲ್ಲಿ ತಂಡ 3-2 ಗೋಲಿನಿಂದ ವಿಜಯ ಸಾಧಿಸಿತು.ನಿಗದಿತ 60 ನಿಮಿಷಗಳಲ್ಲಿ ಭಾರತದ ಪರವಾಗಿ ರೋಪ್ನಿ ಕುಮಾರಿ 8ನೇ ನಿಮಿಷ್, ಜ್ಯೋತಿ ಛತ್ರಿ 17ನೇ, ಸುನೆಲಿತಾ ಟೊಪ್ಪೊ 53ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ನ್ಯೂಜಿಲ್ಯಾಂಡ್ ಪರವಾಗಿ ಇಸಾಬೆಲ್ಲಾ ಸ್ಟೋರಿ 11ನೇ, ಮೆಡೆಲಿನ್ ಹ್ಯಾರಿಸ್ 14ನೇ, ರಿಯಾನಾ ಫೋ 49 ನೇ ನಿಮಿಷದಲ್ಲಿ ಗೋಲು ಪಡೆದರು. ಇದರಿಂದ ಪಂದ್ಯ 3-3 ರಲ್ಲಿ ಸಮಬಲಗೊಂಡಿತು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ನಡೆಸಲಾಯಿತು.