ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಲೊವ್ಲಿನಾ, ಪರ್ವೀನ್, ಸವೀಟಿ ಮತ್ತು ಅಲ್ಫಿಯಾ ಪಠಾಣ್

ಜೋರ್ಡಾನ್‌: ಶುಕ್ರವಾರ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್, ಪರ್ವೀನ್ ಹೂಡಾ, ಸವೀಟಿ ಮತ್ತು ಅಲ್ಫಿಯಾ ಪಠಾಣ್ ಚಿನ್ನದ ಪದಕಗಳನ್ನು ಪಡೆದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಭಾರತದ ಪರ್ವೀನ್ ಜಪಾನ್‌ನ ಕಿಟೊ ಮಾಯ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಸರ್ವಾನುಮತದ ನಿರ್ಧಾರದ ಮೂಲಕ ನಾಲ್ಕನೇ ಶ್ರೇಯಾಂಕದ ಮಾಯ್ ಅನ್ನು ಸೋಲಿಸಲು ಪ್ರಬಲ ಪ್ರದರ್ಶನವನ್ನು ನೀಡಿದರು. ಲೊವ್ಲಿನಾ ಅವರು ಉಜ್ಬೇಕಿಸ್ತಾನದ ರುಜ್ಮೆಟೋವಾ ಸೊಖಿಬಾ ಅವರನ್ನು 5-0 ಅಂತರದಲ್ಲಿ ಅವಿರೋಧ ನಿರ್ಣಯದಿಂದ ಸೋಲಿಸಿದರು. ಈ ಗೆಲುವು ಅವರ ಮನೋಬಲವನ್ನು ಹೆಚ್ಚಿಸಿದೆ.

ಸವೀಟಿ ಅವರು ಕಜಕಿಸ್ತಾನದ ಗುಲ್ಸಯಾ ಯೆರ್ಜಾನ್ ಅವರನ್ನು 5-0 ಅಂತರದಿಂದ ಸೋಲಿಸಿದರು. ಎದುರಾಳಿಯು ಚಿನ್ನವನ್ನು ಪಡೆಯಲು ಅನರ್ಹರಾಗಿದ್ದರಿಂದ ಅಲ್ಫಿಯಾ ಅವರು ಜೋರ್ಡಾನ್‌ನ ಇಸ್ಲಾಂ ಹುಸೈಲಿಯನ್ನು ಸೋಲಿಸಿ ಚಿನ್ನ ಪಡೆದಿದ್ದಾರೆ. ಮತ್ತೊಂದೆಡೆ, ಮಿನಾಕ್ಷಿ ಅವರು ಫ್ಲೈವೇಟ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆಯುವ ಮೂಲಕ ತಮ್ಮ ಚೊಚ್ಚಲ ಏಷ್ಯನ್ ಚಾಂಪಿಯನ್‌ಶಿಪ್ ಅಭಿಯಾನವನ್ನು ಮುಕ್ತಾಯಗೊಳಿಸಿದರು. ಮಿನಾಕ್ಷಿ ಸಾಕಷ್ಟು ಶ್ರಮ ಹಾಕಿದ್ದರೂ ಚಿನ್ನದ ಪದಕವನ್ನು ಜಪಾನ್‌ನ ಕಿನೋಶಿತಾ ರಿಂಕಾ ವಿರುದ್ಧ 1-4 ಅಂತರದಲ್ಲಿ ಕಳೆದುಕೊಂಡರು.

ಆರು ಬಾರಿ ಏಷ್ಯನ್ ಪದಕ ವಿಜೇತ ಶಿವ ಥಾಪಾ ಇಂದು ಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಅಬ್ದುಲ್ಲಾವ್ ರುಸ್ಲಾನ್ ಅವರನ್ನು ಎದುರಿಸಲಿದ್ದಾರೆ. ಅವರು ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 2019 ರ ಏಷ್ಯನ್ ಚಾಂಪಿಯನ್ ತಜಕಿಸ್ತಾನದ ಬಖೋದುರ್ ಉಸ್ಮಾನೋವ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. 27 ದೇಶಗಳ ಒಟ್ಟು 267 ಬಾಕ್ಸರ್‌ಗಳು ಈ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ.