ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ನೆದರ್ಲ್ಯಾಂಡ್ನ ರಾಜಧಾನಿ ಆಮ್ಸ್ಟರ್ಡ್ಯಾಮ್ನಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಮಾಜಿ, ಹಾಲಿ ಆಟಗಾರರು ಕ್ರಿಕೆಟ್ ಆಟವಲ್ಲದೇ, ಉದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಅದಕ್ಕೆ ರೈನಾ ಇಂಡಿಯನ್ ರೆಸ್ಟೋರೆಂಟ್ ಎಂದು ಹೆಸರಿಟ್ಟಿದ್ದಾರೆ.
ಸ್ವತಃ ಆಹಾರ ಪ್ರೇಮಿಯೂ ಆಗಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಹೊಸ ಇನಿಂಗ್ಸ್ ಆರಂಭಿಸಿದ್ದು, ನೆದರ್ಲ್ಯಾಂಡ್ನ ಆಮ್ಸ್ಟರ್ಡ್ಯಾಮ್ನಲ್ಲಿ ತಮ್ಮದೇ ಹೆಸರಿನಲ್ಲಿ ರೆಸ್ಟೋರೆಂಟ್ ಶುರು ಮಾಡಿದ್ದಾರೆ. ರೆಸ್ಟೋರೆಂಟ್ನ ಕೆಲ ಚಿತ್ರಗಳನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಇದಕ್ಕೆ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.
ನಳಪಾಕ ಕೌಶಲ್ಯವನ್ನೂ ಹೊಂದಿರುವ ಕ್ರಿಕೆಟರ್ ರೈನಾ ತಾವೇ ಪಾಕಶಾಲೆಯಲ್ಲಿ ನಿಂತು ಕುಕ್ಕಿಂಗ್ ಮಾಡುತ್ತಿರುವ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುವುದೂ ಉಂಟು. ಇದೀಗ ನೇರವಾಗಿ ಯುರೋಪ್ ಖಂಡದ ನೆದರ್ಲ್ಯಾಂಡ್ನಲ್ಲಿ ಭಾರತೀಯ ಸವಿರುಚಿ ಉಣಬಡಿಸಲು ಸಜ್ಜಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರೈನಾ, “ಆಮ್ಸ್ಟರ್ಡ್ಯಾಮ್ನಲ್ಲಿ ‘ರೈನಾ ಇಂಡಿಯನ್ ರೆಸ್ಟೋರೆಂಟ್’ ಅನ್ನು ಪರಿಚಯಿಸಲು ನಾನು ಉತ್ಸುಕನಾಗಿದ್ದೇನೆ. ಆಹಾರ ಮತ್ತು ಅಡುಗೆಯ ಮೇಲಿನ ಪ್ರೀತಿಯು ಅನಾವರಣಗೊಳ್ಳಲಿದೆ. ಹಲವು ವರ್ಷಗಳಿಂದ ನೀವು ನನ್ನ ಆಹಾರದ ಮೇಲಿನ ಪ್ರೀತಿಯನ್ನು ನೋಡಿದ್ದೀರಿ ಮತ್ತು ನನ್ನ ಪಾಕಶಾಲೆಯ ಸಾಹಸಗಳಿಗೆ ಸಾಕ್ಷಿಯಾಗಿದ್ದೀರಿ.
ಇದೀಗ ನಾನು ಹೊಸ ಯೋಜನೆಯಲ್ಲಿದ್ದೇನೆ. ಭಾರತದ ವಿವಿಧ ಭಾಗಗಳ ನಿಜವಾದ ಸವಿರುಚಿಗಳನ್ನು ನೇರವಾಗಿ ಯುರೋಪಿಗರಿಗೆ ಸಿಗುವಂತೆ ಮಾಡುವೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
36ರ ಹರೆಯದ ರೈನಾ ಭಾರತದ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಆಗಿದ್ದರು. ಈವರೆಗೂ ಅವರು 18 ಟೆಸ್ಟ್, 226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಎಲ್ಲ ಸ್ವರೂಪದ 7,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2008 ರಿಂದ 2021 ರ ನಡುವೆ ಐಪಿಎಲ್ನ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಲಯನ್ಸ್ ಫ್ರಾಂಚೈಸಿ ಪರ ಆಡಿದ್ದು, 5500 ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ.
ಕೊರೊನಾ ಕಾರಣಕ್ಕಾಗಿ ಭಾರತದ ಬದಲಾಗಿ ಯುಎಇನಲ್ಲಿ 2020 ರ ಐಪಿಎಲ್ ಸೀಸನ್ನಲ್ಲಿ ಮಾತ್ರ ಅವರು ಆಡಿರಲಿಲ್ಲ.
ಭಾರತೀಯ ರುಚಿಕರ ಖಾದ್ಯ: ರೈನಾ ಆರಂಭಿಸಿರುವ ರೆಸ್ಟೋರೆಂಟ್ನಲ್ಲಿ ಪಕ್ಕಾ ಭಾರತೀಯ ಶೈಲಿಯ ಖಾದ್ಯಗಳೇ ಇರಲಿವೆ ಎಂದು ಹೇಳಿದ್ದಾರೆ. ಈ ಮಣ್ಣಿನ ರುಚಿಯೇ ಯುರೋಪಿಗರಿಗೆ ಸಿಗಲಿದೆ.
ಹೋಟೆಲ್ ಉದ್ಯಮದಲ್ಲಿ ನನ್ನೊಂದಿಗೆ ಕೈಜೋಡಿಸಿ. ಹೊಸ ಪ್ರಕಾರದ ಬಾಯಲ್ಲಿ ನೀರೂರಿಸುವ ಖಾದ್ಯಗಳು, ರೈನಾ ಇಂಡಿಯನ್ ರೆಸ್ಟೋರೆಂಟ್ನ ಭವ್ಯವಾದ ಅನಾವರಣಕ್ಕಾಗಿ ಕಾಯಿರಿ ಎಂದು ಇದೇ ವೇಳೆ ಹೇಳಿದ್ದಾರೆ.
ರೈನಾ ಅಲ್ಲದೇ, ಹಲವು ಕ್ರಿಕೆಟಿಗರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಮೊದಲೇ ರವೀಂದ್ರ ಜಡೇಜಾ ಅವರ ʻಜಡ್ಡುಸ್ ಫುಡ್ ಫೀಲ್ಡ್ʼ, ವಿರಾಟ್ ಕೊಹ್ಲಿ ಅವರ ʻ ನುಯೇವಾʼ, ಕಪಿಲ್ ದೇವ್ ಅವರ ʻಎಲೆವೆನ್ಸ್ʼ, ಜಹೀರ್ ಖಾನ್ ಅವರ ʻಡೈನ್ ಫೈನ್ʼ ಎಂಬ ಹೆಸರಿನ ಹೋಟೆಲ್ಗಳನ್ನು ದೇಶದ ವಿವಿಧೆಡೆ ನಡೆಸುತ್ತಿದ್ದಾರೆ. ಇದೀಗ ರೈನಾ ಕೂಡ ದೂರದ ನೆದರ್ಲ್ಯಾಂಡ್ಸ್ನಲ್ಲಿ ಭಾರತದ ಖಾದ್ಯಗಳನ್ನು ಪರಿಚಯಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ.