ಉಡುಪಿ: ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ಮಾನ್ಯ ರಾಜ್ಯ ರೈಲ್ವೇ ಖಾತೆ ಸಚಿವರಾದ ಸುರೇಶ್ ಅಂಗಡಿಯವರು ಹೊಸ ರೈಲನ್ನು ಘೋಷಿಸಿದ್ದಾರೆ, ಈ ರೈಲು ಪಡೀಲ್ ಬೈಪಾಸ್ ಮೂಲಕ ಉಡುಪಿಯನ್ನು ತಲುಪಲಿದೆ. ಈ ರೈಲು ಸೇವೆಯು ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಷ್ಟು ಕಾಲದ ಅನಗತ್ಯ ಕಾಯುವಿಕೆಯನ್ನು ತಪ್ಪಿಸಿ, ಬೆಂಗಳೂರು-ಉಡುಪಿ/ಕುಂದಾಪುರ ಮಧ್ಯೆ ರೈಲು ಪ್ರಯಾಣ ಸಮಯವನ್ನು ಮೂರು ಗಂಟೆಗಳಷ್ಟು ಕಾಲಕಡಿತಗೊಳಿಸುವ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನತೆ ಕಡಿಮೆ ಸಮಯದಲ್ಲಿ ಕರಾವಳಿ ಕರ್ನಾಟಕವನ್ನು ತಲುಪುವಂತೆ ಮಾಡುವುದು.
ದೆಹಲಿಯಲ್ಲಿ ಮಾನ್ಯ ಸಚಿವರಿಗೆ ಸಂಸದೆ ಶೋಭಾ ಕರಂದ್ಲಾಜೆ, ಕರಾವಳಿಯ ಈ ಬಹು ದೊಡ್ಡ ಬೇಡಿಕೆಯನ್ನು ಸಲ್ಲಿಸಿದ ಸಂದರ್ಭ, ಮಾನ್ಯ ಸಚಿವರು ಖುದ್ದಾಗಿ ಸಂಸದರ ಸಮ್ಮುಖದಲ್ಲಿ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಂಡಿರುತ್ತಾರೆ. ಕರಾವಳಿಗೆ ನ್ಯಾಯಯುತವಾದ ರೈಲನ್ನು ಒದಗಿಸುವ ಸಂಸದರ ಅವಿರತ ಪ್ರಯತ್ನ ಇಂದು ಫಲಪ್ರದವಾಗಿದೆ ಎಂದು ಸಂಸದೆಯವರ ಕಚೇರಿ ಪ್ರಕಟನೆ ತಿಳಿಸಿದೆ.
ಸಂಸದೆ ಶೋಭಾ ಕರಂದ್ಲಾಜೆಯವರ ಪ್ರಯತ್ನದಿಂದಾಗಿ ಆರಂಭಗೊಳ್ಳುತ್ತಿರುವ ಈ ರೈಲು ಬೆಂಗಳೂರಿನಿಂದ ಸಂಜೆ 06:45ಕ್ಕೆ ಹೊರಟು, ಬೆಳಗ್ಗೆ 04:50ಕ್ಕೆ ಉಡುಪಿ, 05:18ಕ್ಕೆ ಕುಂದಾಪುರಕ್ಕೆ ತಲುಪುವುದು. ಸಂಜೆ 04:40ಕ್ಕೆ ವಾಸ್ಕೋದಿಂದ ಆರಂಭಗೊಂಡು, ರಾತ್ರಿ 10:54ಕ್ಕೆ ಕುಂದಾಪುರ, 11:24ಕ್ಕೆ ಉಡುಪಿಯಿಂದ ಹೊರಟು ಬೆಂಗಳೂರಿಗೆ ಬೆಳಿಗ್ಗೆ ಸುಮಾರು 09:ಗಂಟೆಗೆ ತಲುಪಲಿದೆ.ವಾಸ್ಕೋ-ಬೆಂಗಳೂರು ಪ್ರಯಾಣ ಸಮಯವನ್ನು ಇನ್ನಷ್ಟು ಸುಧಾರಣೆಗೊಳಿಸಲಾಗುವುದು ಎಂಬ ಭರವಸೆಯುರೈಲ್ವೆ ಅಧಿಕಾರಿಗಳಿಂದ ದೊರಕಿದೆ. ಈ ಮೂಲಕ ಕರಾವಳಿ ಕರ್ನಾಟಕದ (ಉಡುಪಿ/ಕುಂದಾಪುರ/ಬೈಂದೂರು/ಕಾರವಾರದ) ದಶಕಗಳ ಬೇಡಿಕೆಯು ಈಡೇರಿದಂತಾಗಿದೆ.
ಉಡುಪಿ-ಕುಂದಾಪುರದ ಪ್ರಯಾಣಿಕರಿಗೆ ಈ ರೈಲು ಬೆಂಗಳೂರು ಹಾಗೂ ವಾಸ್ಕೋವನ್ನು ಸಂಪರ್ಕಿಸಲುಬೇಕಾದ ಎರಡು ರೈಲಿನ ಸೌಲಭ್ಯವನ್ನು ಒಂದೇ ರೈಲಿನ ಮೂಲಕ ಕಲ್ಪಿಸಿಕೊಡುತ್ತಲಿದೆ ಹಾಗೂ ಗೋವಾ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಅವಶ್ಯವಿದ್ದ ರೈಲಿನ ಬೇಡಿಕೆಯನ್ನೂ ಈಡೇರಿಸಲಿದೆ. ಈ ಹೊಸ ರೈಲು ಇನ್ನು ಕೆಲವೇ ಕೆಲವು ದಿನಗಳಲ್ಲಿ ಓಡಾಟವನ್ನು ಆರಂಭಿಸಲಿದೆ ಎಂದು ಮಾನ್ಯ ಸಚಿವರು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.