ಭಾರತೀಯ ಮೂಲದ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ಥರ್ಮನ್ ಷಣ್ಮುಗರತ್ನಂ ಅವರು ಮುಂದಿನ ಆರು ವರ್ಷಗಳ ಕಾಲ ಸಿಂಗಾಪುರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈತ ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿದ್ದು ವಿಶ್ವದಲ್ಲಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಮೂರನೇ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ.
ಥರ್ಮನ್ ಷಣ್ಮುಗರತ್ನಂ ಅವರ ಪೂರ್ವಜರು ತಮಿಳುನಾಡಿನವರಾಗಿದ್ದಾರೆ. 2.7 ಮಿಲಿಯನ್‌ಗಿಂತಲೂ ಹೆಚ್ಚು ಸಿಂಗಾಪುರದ ಮತದಾರರಲ್ಲಿ ಸರಿಸುಮಾರು ಶೇಕಡಾ ಒಂಬತ್ತು ಪ್ರತಿಶತವನ್ನು ರೂಪಿಸುವ ಸಿಂಗಾಪುರದ ಭಾರತೀಯ ಸಮುದಾಯದಿಂದ ಅವರು ಚುನಾಯಿಸಲ್ಪಟ್ಟಿದ್ದಾರೆ.
66 ವರ್ಷದ ಅರ್ಥಶಾಸ್ತ್ರಜ್ಞ , ಕ್ರೀಡಾ ಪಟು ಮತ್ತು ಕವಿಯಾಗಿರುವ ಥರ್ಮನ್, ನ್ಯಾಯಯುತ ಮತ್ತು ಹೆಚ್ಚು ಅಂತರ್ಗತ ಸಮಾಜಕ್ಕಾಗಿ ರಾಷ್ಟ್ರೀಯ ನೀತಿಗಳನ್ನು ರೂಪಿಸುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರದ ಧ್ವಜವನ್ನು ಎತ್ತಿ ಹಿಡಿಯಲು ಬದ್ದನಾಗಿದ್ದೇನೆ ಎಂದಿದ್ದಾರೆ.
ಹಾಲಿ ಅಧ್ಯಕ್ಷ ಹಲೀಮಾ ಯಾಕೋಬ್ ಅವರ ಆರು ವರ್ಷಗಳ ಅವಧಿಯು ಸೆಪ್ಟೆಂಬರ್ 13 ರಂದು ಕೊನೆಗೊಳ್ಳಲಿದೆ. ಚುನಾಯಿತ ಅಧ್ಯಕ್ಷರು ಆರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.
ಫೆಬ್ರವರಿ 25, 1957 ರಂದು ಸಿಂಗಾಪುರದಲ್ಲಿ ಜನಿಸಿದ ಥರ್ಮನ್ 19 ನೇ ಶತಮಾನದಿಂದೀಚಿಗಿನ ತಮಿಳು ಸಂತತಿಯ ಬಹು-ಪೀಳಿಗೆಯ ಸಿಂಗಾಪುರ ನಿವಾಸಿ. ಸಿಂಗಾಪುರ್ ಕ್ಯಾನ್ಸರ್ ರಿಜಿಸ್ಟ್ರಿಯನ್ನು ಸ್ಥಾಪಿಸಿದ ಮತ್ತು ಕ್ಯಾನ್ಸರ್ ಸಂಶೋಧನೆ ಮತ್ತು ರೋಗಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಮುನ್ನಡೆಸುವ “ಸಿಂಗಾಪೂರ್‌ನಲ್ಲಿ ರೋಗಶಾಸ್ತ್ರದ ಪಿತಾಮಹ” ಎಂದು ಕರೆಯಲ್ಪಡುವ ವೈದ್ಯಕೀಯ ವಿಜ್ಞಾನಿ ಪ್ರೊಫೆಸರ್ ಕೆ. ಷಣ್ಮುಗರತ್ನಂ ಅವರ ಮೂರು ಮಕ್ಕಳಲ್ಲಿ ಥರ್ಮನ್ ಒಬ್ಬರಾಗಿದ್ದಾರೆ.
ಥರ್ಮನ್ ಅವರು ಜೇನ್ ಯುಮಿಕೊ ಇಟ್ಟೋಗಿ ಅವರನ್ನು ವಿವಾಹವಾಗಿದ್ದಾರೆ. ಈಕೆ ವಕೀಲೆ ಹಾಗೂ ಸಿಂಗಾಪುರದಲ್ಲಿ ಸಾಮಾಜಿಕ ಉದ್ಯಮ ಮತ್ತು ಲಾಭರಹಿತ ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದಂಪತಿಗೆ ಒಬ್ಬ ಪುತ್ರಿ ಮತ್ತು ಮೂವರು ಗಂಡು ಮಕ್ಕಳಿದ್ದಾರೆ.