ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಮೂರು ಪದಕ ಖಚಿತಗೊಳಿಸಿದ ಭಾರತೀಯ ಬಾಕ್ಸರ್ ಗಳು

ತಾಷ್ಕೆಂಟ್: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಭಾರತೀಯ ಬಾಕ್ಸರ್‌ಗಳು ಮೂರು ಪದಕಗಳನ್ನು ಖಚಿತಪಡಿಸಿದ್ದಾರೆ. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಬಗ್ಗೆ ಟ್ವೀಟ್ ಮಾಡಿ ತಾಷ್ಕೆಂಟ್‌ನಲ್ಲಿ ನಡೆದ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ದೀಪಕ್ ಭೋರಿಯಾ, ಹುಸಾಮುದ್ದೀನ್ ಮತ್ತು ನಿಶಾಂತ್ ದೇವ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ದೀಪಕ್ ಕುಮಾರ್ ಭೋರಿಯಾ 2023 ರ ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 51 ಕೆಜಿ ಫ್ಲೈವೇಟ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಕಿರ್ಗಿಸ್ತಾನ್‌ನ ನೂರ್ಜಿಗಿಟ್ ದಿಯುಶೆಬಾವ್ ಅವರನ್ನು 5-0 ರಿಂದ ಸೋಲಿಸುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ದೊರಕಿಸಿಕೊಟ್ಟಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಲ್ಲಿ ಪದಕ ಗೆದ್ದ ಎಂಟನೇ ಭಾರತೀಯರಾಗಿ ದೀಪಕ್ ಹೊರಹೊಮ್ಮಿದ್ದಾರೆ ಮತ್ತು ಶುಕ್ರವಾರದ ಸೆಮಿಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಫ್ರಾನ್ಸ್‌ನ ಬಿಲ್ಲಾಲ್ ಬೆನ್ನಾಮಾ ಅವರನ್ನು ಎದುರಿಸಲಿದ್ದಾರೆ. ಬಾಕ್ಸರ್ ಗಳಾದ ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ) ಮತ್ತು ನಿಶಾಂತ್ ದೇವ್ (71 ಕೆಜಿ) ಕೂಡಾ ಕ್ವಾರ್ಟರ್‌ಫೈನಲ್ ಗೆಲುವುಗಳೊಂದಿಗೆ ಪದಕಗಳನ್ನು ಖಚಿತಪಡಿಸಿದ್ದಾರೆ. ಇದು ಭಾರತದ ಕ್ರೀಡಾಪಟುಗಳು ವಿಶ್ವ ಪಟಲದಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಯಾಗಿದೆ.