18 ತಿಂಗಳ ಮಗುವನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ರಕ್ಷಿಸಿದ ಭಾರತೀಯ ಸೇನೆ

ಗುಜರಾತ್: ಗೋಲ್ಡನ್ ಕಟಾರ್ ಆರ್ಟಿಲರಿ ಬ್ರಿಗೇಡ್‌ನ ಕ್ಯಾಪ್ಟನ್ ಸೌರಭ್ ಮತ್ತು ಅವರ ತಂಡವು ಗುಜರಾತಿನ ಸುರೇಂದ್ರ ನಗರದಲ್ಲಿ 300 ಅಡಿ ಆಳದ ಕೊಳವೆ ಬಾವಿಯಿಂದ 18 ತಿಂಗಳ ಮಗು ಶಿವಂನನ್ನು ಸುರಕ್ಷಿತವಾಗಿ ರಕ್ಷಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ತನ್ನ ಅಚಲವಾದ ಬದ್ಧತೆಗೆ ಮತ್ತೊಂದು ಪುರಾವೆಯನ್ನು ನೀಡುತ್ತಾ, ಭಾರತೀಯ ಸೇನೆಯು ಸುರೇಂದ್ರನಗರದ ಧರಂಗಧರ ತಾಲೂಕಿನ ದುದಾಪುರ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 18 ತಿಂಗಳ ಮಗುವನ್ನು ರಕ್ಷಿಸಿದೆ.

ಮಂಗಳವಾರ ತಡರಾತ್ರಿ ಮಗು ಕೊಳವೆ ಬಾವಿಗೆ ಬಿದ್ದಿದ್ದು, ನಂತರ ಧರಂಗಧರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ ವರ್ಮಾ ಅವರು ಪ್ರದೇಶದ ಮಿಲಿಟರಿ ಠಾಣೆಗೆ ಕರೆ ಮಾಡಿ, ಶಿವಂ ಎಂಬ ಮಗುವನ್ನು ರಕ್ಷಿಸುವಂತೆ ಸೇನೆಗೆ ಮನವಿ ಮಾಡಿದ್ದರು. ಕ್ಯಾಪ್ಟನ್ ಸೌರವ್ ನೇತೃತ್ವದ ಗೋಲ್ಡನ್ ಕಟಾರ್ ಗನ್ನರ್ಸ್, 10 ನಿಮಿಷಗಳಲ್ಲಿ, ಮನಿಲಾ ರೋಪ್, ಸರ್ಚ್ ಲೈಟ್ ಗಳು, ಸುರಕ್ಷತಾ ಸರಂಜಾಮು ಮತ್ತು ಕ್ಯಾರಬೈನರ್ನಂತಹ ಅಗತ್ಯ ಉಪಕರಣಗಳೊಂದಿಗೆ ಲಘು ವಾಹನದಲ್ಲಿ ಸ್ಥಳಕ್ಕೆ ಧಾವಿಸಿದ್ದರು.

ತಂಡವು ಪರಿಸ್ಥಿತಿಯನ್ನು ಅವಲೋಕಿಸಿದ ನಂತರ, ಲೋಹದ ಕೊಕ್ಕೆಯನ್ನು ಮಾರ್ಪಡಿಸಿ ಅದನ್ನು ಮನಿಲಾ ಹಗ್ಗಕ್ಕೆ ಕಟ್ಟಿ 300 ಅಡಿ ಆಳದ ಕೊಳವೆ ಬಾವಿಯೊಳಗೆ ಇಳಿಸಿ, ನೆಲಮಟ್ಟದಿಂದ ಸುಮಾರು 20-25 ಅಡಿ ಕೆಳಗೆ ಸಿಲುಕಿಕೊಂಡಿದ್ದ ಶಿವಂನನ್ನು ನಿಧಾನವಾಗಿ ಆದರೆ ಸ್ಥಿರವಾಗಿ ಮೇಲಕ್ಕೆ ಎಳೆದು ತರುವಾಯ ಕೊಳವೆ ಬಾವಿಯಿಂದ ಹೊರಗೆಳೆದು ರಕ್ಷಿಸಿದ್ದರು.

ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ.