ಲಡಾಖ್: ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿರುವ ಸಿಯಾಚಿನ್ ಗ್ಲೇಸಿಯರ್ ಅನ್ನು ವಶಪಡಿಸಿಕೊಂಡ ಮೂವತ್ತೆಂಟು ವರ್ಷಗಳ ನಂತರ, ಭಾರತೀಯ ಸೇನೆಯು 1984 ರಲ್ಲಿ ಆಪರೇಷನ್ ಮೇಘದೂತ್ ಸಮಯದಲ್ಲಿ ಕಾಣೆಯಾಗಿದ್ದ ತನ್ನ ಸೈನಿಕರೊಬ್ಬರ ಅವಶೇಷಗಳನ್ನು ಸೋಮವಾರ ಪತ್ತೆಮಾಡಿದೆ.
ಪತ್ತೆಯಾದ ಸೈನಿಕನ ಅವಶೇಷವು19 ಕುಮಾಊಂ ರೆಜಿಮೆಂಟಿನ 20 ಸದಸ್ಯರ ಆರ್ಮಿ ಗಸ್ತಿನ ಭಾಗವಾಗಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಸಿಂಗ್ ಅವರದ್ದು ಎಂದು ಗುರುತಿಸಿ, ಉಧಮ್‌ಪುರ ಮೂಲದ ಡಿಫೆನ್ಸ್ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಅಭಿನವ್ ಅವರು ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇ 29, 1984 ರಂದು ಶಂಕರ್ ಟಾಪ್ ನಲ್ಲಿ ಹಿಮಪಾತದಡಿ ಸಿಲುಕಿ ಚಂದ್ರಶೇಖರ್ ಸಿಂಗ್ ಮತ್ತು ಸಂಗಡಿಗರು ಹುತಾತ್ಮರಾಗಿದ್ದರು. ಸಿಂಗ್ ಅವರ ಆರ್ಮಿ ಡಿಸ್ಕ್‌ನಿಂದ ಅವರನ್ನು ಗುರುತಿಸಲಾಗಿದೆ ಮತ್ತು ಸೈನಿಕರ ಬಗ್ಗೆ ವಿವರಗಳನ್ನು ಸೇನಾ ದಾಖಲೆಗಳಿಂದ ಪಡೆಯಲಾಗಿದೆ ಎಂದು ಕರ್ನಲ್ ಅಭಿನವ್ ಹೇಳಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಅವರ ಕುಟುಂಬಕ್ಕೆ ಅವಶೇಷಗಳನ್ನು ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು. ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಅವರ ಪತ್ನಿ ಶಾಂತಿ ದೇವಿ ಮತ್ತು ಇಬ್ಬರು ಪುತ್ರಿಯರನ್ನು ಒಳಗೊಂಡ ಕುಟುಂಬಕ್ಕೆ ಅವಶೇಷಗಳನ್ನು ಹಸ್ತಾಂತರಿಸಲಾಗುವುದು ಎಂದು ಲೆಫ್ಟಿನೆಂಟ್ ಕರ್ನಲ್ ಅಭಿನವ್ ಹೇಳಿದರು. ಶಾಂತಿ ದೇವಿ ಅವರ ಮನೆಗೆ ಆಗಮಿಸಿದ ಹಲ್ದ್ವಾನಿ ಸಬ್ ಕಲೆಕ್ಟರ್ ಮನೀಶ್ ಕುಮಾರ್ ಮತ್ತು ತಹಸೀಲ್ದಾರ್ ಸಂಜಯ್ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.
1984 ರ ಏಪ್ರಿಲ್ 13ರಂದು ಬೆಳಿಗ್ಗೆ ಸಿಯಾಚಿನ್ ಗ್ಲೇಸಿಯರ್ ಅನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳಿಂದ ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಲಾಗಿತ್ತು. ಈ ಆಪರೇಷನ್ ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಈ ಸಮಯದಲ್ಲಿ ನಡೆದ ಹಿಮಪಾತದಲ್ಲಿ ಅನೇಕ ಯೋಧರು ಹುತಾತ್ಮರಾಗಿದ್ದು, ಅವರ ಅವಶೇಷಗಳಿಗಾಗಿ ಶೋಧ ನಡೆಯುತ್ತಿತ್ತು. ಶೋಧ ಕಾರ್ಯಾಚರಣೆಯಲ್ಲಿ 20 ಸೈನಿಕರ ಪೈಕಿ 12 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಸಿಂಗ್ ಸೇರಿದಂತೆ ಉಳಿದವರ ಅವಶೇಷಗಳು ಪತ್ತೆಯಾಗಿರಲಿಲ್ಲ.
ಅದೃಷ್ಟವಶಾತ್, 38 ವರ್ಷಗಳ ನಂತರ, ರಾಜಸ್ಥಾನ ರೈಫಲ್ಸ್‌ನ ಗಸ್ತು ತಂಡವು ಹಿಮಪಾತದಿಂದ ನಾಶವಾದ ಒಂದು ಆಶ್ರಯ ತಾಣವನ್ನು ಕಂಡಿತು. ಅದರ ಸುತ್ತಮುತ್ತಲು ಹುಡುಕಾಡಿದಾಗ ಅವರಿಗೆ ಸಿಂಗ್ ಅವಶೇಷಗಳು, ಹರಿದ ಬಟ್ಟೆಗಳು ಮತ್ತು ಆರ್ಮಿ ಡಿಸ್ಕ್ ಮುಂತಾದವು ದೊರೆತಿವೆ.