ಭಾರತೀಯ ಸೇನೆಯಿಂದ ಗೌರವ ಸಲ್ಲಿಕೆ : ಸಿಯಾಚಿನ್​ನಲ್ಲಿ ಅಗ್ನಿವೀರ್​​​ ಅಕ್ಷಯ್​ ಹುತಾತ್ಮ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನ ಸಿಯಾಚಿನ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ‘ಅಗ್ನಿವೀರ್​’​​​ ಗವಟೆ ಅಕ್ಷಯ್​ ಲಕ್ಷ್ಮಣ್​ ಎಂಬುವರು ಹುತಾತ್ಮರಾಗಿದ್ದಾರೆ. ಸಿಯಾಚಿನ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಾರಾಷ್ಟ್ರದ ಮೂಲದ ಅಗ್ನಿವೀರ್​ ಗವಟೆ ಅಕ್ಷಯ್​ ಲಕ್ಷ್ಮಣ್​ ಹುತಾತ್ಮರಾಗಿದ್ದಾರೆ. ಇವರು ಸೇನಾ ಕಾರ್ಯಾಚರಣೆಯಲ್ಲಿ ಪ್ರಾಣವನ್ನು ತ್ಯಾಗ ಮಾಡಿದ ಮೊದಲ ಅಗ್ನಿವೀರ್​ ಆಗಿದ್ದು, ಭಾರತೀಯ ಸೇನೆಯು ಭಾನುವಾರ ಅಂತಿಮ ಗೌರವ ಸಲ್ಲಿಸಿದೆ.

ಸಿಯಾಚಿನ್ ಹಿಮನದಿಯನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಯಲಾಗುತ್ತದೆ. ಅಲ್ಲದೇ, ಇದು ಭಾರತದ ಅತಿದೊಡ್ಡ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಹಿಮನದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಿಯಂತ್ರಣ ರೇಖೆಯ ಬಳಿ ಇದೆ. ಕಳೆದ ಜೂನ್‌ನಲ್ಲಿ ಸಿಯಾಚಿನ್ ಹಿಮನದಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸೇನಾ ಯೋಧ ಸಾವನ್ನಪ್ಪಿ, ಮೂವರು ಯೋಧರು ಗಾಯಗೊಂಡಿದ್ದರು. ರೆಜಿಮೆಂಟ್​ ಮೆಡಿಕಲ್​ ಆಫೀಸರ್ ಕ್ಯಾಪ್ಟನ್ ಅಂಶುಮಾನ್ ಸಿಂಗ್​ ಅವರು ಗಂಭೀರವಾದ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು.ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮನದಿಯಲ್ಲಿ ಗವಟೆ ಅಕ್ಷಯ್​ ಲಕ್ಷ್ಮಣ್​ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಕ್ಷಯ್ ಮಹಾರಾಷ್ಟ್ರ ಮೂಲದವರಾಗಿದ್ದು, ಇವರ ಸಾವಿನ ಕುರಿತು ನಿಖರ ಮಾಹಿತಿ ತಕ್ಷಣಕ್ಕೆ ತಿಳಿದುಬಂದಿಲ್ಲ. ಭಾರತೀಯ ಸೇನೆ ಹಾಗೂ ಫೈರ್​ ಅಂಡ್ ಫ್ಯೂರಿ ಕಾರ್ಪ್ಸ್​ ಮೃತ ಅಗ್ನಿವೀರ್ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ.

”ಸಿಒಎಎಸ್ ಜನರಲ್ ಮನೋಜ್ ಪಾಂಡೆ ಮತ್ತು ಭಾರತೀಯ ಸೇನೆಯ ಎಲ್ಲ ಶ್ರೇಣಿಗಳ ಅಧಿಕಾರಿಗಳು ಸಿಯಾಚಿನ್‌ನ ಎತ್ತರದ ಕರ್ತವ್ಯದಲ್ಲಿ ಅಗ್ನಿವೀರ್ (ಆಪರೇಟರ್) ಗವಟೆ ಅಕ್ಷಯ್ ಲಕ್ಷ್ಮಣ್ ಅವರ ಸರ್ವೋಚ್ಚ ತ್ಯಾಗಕ್ಕೆ ಸೆಲ್ಯೂಟ್​ ಸಲ್ಲಿಸುತ್ತವೆ. ಈ ದುಃಖದ ಸಮಯದಲ್ಲಿ ಭಾರತೀಯ ಸೇನೆಯು ದುಃಖತಪ್ತ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ” ಎಂದು ಭಾರತೀಯ ಸೇನೆಯು ಸಾಮಾಜಿಕ ಜಾಲತಾಣ ‘ಎಕ್ಸ್​’ನ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಮಾಡಿದೆ.