ರಜೌರಿಯಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ: ಹ್ಯಾಂಡ್ಲರ್ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತೆತ್ತ ‘ಕೆಂಟ್’ ಆರ್ಮಿ ಶ್ವಾನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸೇನಾ ಯೋಧ ಮತ್ತು ಶಂಕಿತ ಪಾಕಿಸ್ತಾನಿ ಭಯೋತ್ಪಾದಕ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರ ಜಾಡು ಹಿಡಿಯುತ್ತಿದ್ದ ಸೈನಿಕರ ತುಕುಡಿಯನ್ನು ಕೆಂಟ್ ಎಂಬ ಆರು ವರ್ಷದ ನಾಯಿ ಮುನ್ನಡೆಸುತ್ತಿತ್ತು.

ಆರ್ಮಿಯ ಹೆಣ್ಣು ಶ್ವಾನ ಕೆಂಟ್ ‘ಆಪರೇಷನ್ ಸುಜಲಿಗಲ’ದ ಮುಂಚೂಣಿಯಲ್ಲಿತ್ತು. ಕೆಂಟ್ ಪಲಾಯನ ಮಾಡುವ ಭಯೋತ್ಪಾದಕರ ಜಾಡು ಹಿಡಿಯುತ್ತಾ ಸೈನಿಕರ ತುಕುಡಿಯನ್ನು ಮುನ್ನಡೆಸುತ್ತಿತ್ತು. ಈ ಸಂದರ್ಭ ಭಾರೀ ಗುಂಡಿನ ದಾಳಿಯಾಗಿದ್ದು, ತನ್ನ ನಿರ್ವಾಹಕರನ್ನು ರಕ್ಷಿಸುತ್ತಾ ಕೆಂಟ್ ಭಾರತೀಯ ಸೇನೆಯ ಅತ್ಯುತ್ತಮ ಸಂಪ್ರದಾಯದ ಭಾಗವಾಗಿ ತನ್ನ ಪ್ರಾಣವನ್ನು ಅರ್ಪಿಸಿತು ಎಂದು ಸೇನೆಯ ಹೇಳಿಕೆ ತಿಳಿಸಿದೆ.

ಭಾರತೀಯ ಸೇನಾ ಅಧಿಕಾರಿಗಳು ಬುಧವಾರ ಲ್ಯಾಬ್ರಡಾರ್ ಕೆಂಟ್ ಸ್ನಿಫರ್ ಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿ ಅಂತ್ಯ ಸಂಸ್ಕಾರಗಳನ್ನು ನೆರವೇರಿಸಿದರು.

ಏತನ್ಮಧ್ಯೆ, ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ದಿನದ ಹಿಂದೆ ಪ್ರಾರಂಭವಾದ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಮತ್ತೊಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

DGP ಜಮ್ಮು ಮತ್ತು ಕಾಶ್ಮೀರ ದಿಲ್ಬಾಗ್ ಸಿಂಗ್, ADGP ಕಾಶ್ಮೀರ ವಿಜಯ್ ಕುಮಾರ್ ಮತ್ತು GOC 15 ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮತ್ತು ಜಮ್ಮು ಮತ್ತು ಕಶ್ಮೀರ ಪೋಲೀಸ್ ಮತ್ತು ಭಾರತೀಯ ಸೇನೆಯ ಅಧಿಕಾರಿಗಳು ಎನ್‌ಕೌಂಟರ್‌ ನಡೆಯುತ್ತಿರುವ ಪ್ರದೇಶಕ್ಕೆ ಧಾವಿಸಿದ್ದಾರೆ.