ಆರ್ಚರಿ ವಿಶ್ವಕಪ್ ಸ್ಟೇಜ್-3 ರ ಸಂಯುಕ್ತ ಮಿಶ್ರ ತಂಡ ಸ್ಪರ್ಧೆ: ಮೊಟ್ಟ ಮೊದಲ ಚಿನ್ನ ಗೆದ್ದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ

ನವದೆಹಲಿ: ನಿನ್ನೆ ಪ್ಯಾರಿಸ್‌ನಲ್ಲಿ ನಡೆದ ವಿಶ್ವಕಪ್ ಸ್ಟೇಜ್-3 ರಲ್ಲಿ ಬಿಲ್ಲುಗಾರರಾದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ ಅವರು ಸಂಯುಕ್ತ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶೂಟ್-ಆಫ್‌ನಲ್ಲಿ ಗ್ರೇಟ್ ಬ್ರಿಟನ್‌ನ ಎಲ್ಲಾ ಗಿಬ್ಸನ್‌ ಎದುರು ಫೈನಲ್‌ನಲ್ಲಿ ಸೋತ ಜ್ಯೋತಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಸಂಯುಕ್ತ ಮಿಶ್ರ ತಂಡದ ಫೈನಲ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ ಜೋಡಿ 152-149 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಮಿಶ್ರ ಸಂಯುಕ್ತ ತಂಡದ ಈವೆಂಟ್‌ನಲ್ಲಿನ ಗೆಲುವಿನ ನಂತರ, ಭಾರತವು ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳೊಂದಿಗೆ ಆರ್ಚರಿ ವಿಶ್ವಕಪ್ 2022 ಪದಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರು ಚಿನ್ನದ ಪದಕಗಳೊಂದಿಗೆ ದಕ್ಷಿಣ ಕೊರಿಯಾ ಅಗ್ರಸ್ಥಾನದಲ್ಲಿದ್ದರೆ ಗ್ರೇಟ್ ಬ್ರಿಟನ್ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಸಿಮ್ರಂಜೀತ್ ಕೌರ್ ಅವರ ಮಹಿಳೆಯರ ರಿಕರ್ವ್ ಆರ್ಚರಿ ತಂಡ ಇಂದು ಚೈನೀಸ್ ತೈಪೆ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಾಡಲಿದೆ.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಿಶ್ರ ಸಂಯುಕ್ತ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತೀಯ ಬಿಲ್ಲುಗಾರ ಜೋಡಿಯನ್ನು ಅಭಿನಂದಿಸಿದ್ದಾರೆ.