ಭಾರತ ಶೀಘ್ರದಲ್ಲೇ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಇಂದೋರ್ನ ರಂಗವಾಸ ಗ್ರಾಮದಲ್ಲಿ ಸರ್ಕಾರಿ ಬ್ಯಾಂಕಿನ ಹಣಕಾಸು ಸೇರ್ಪಡೆ ಅಭಿಯಾನ “ಸಂತೃಪ್ತಿ ಶಿವರ್” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಲ್ಹೋತ್ರಾ, 11 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮತ್ತು ಆರ್ಬಿಐ ಸಹಯೋಗದೊಂದಿಗೆ ಜನ ಧನ್ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ದೇಶಾದ್ಯಂತ ಅಭಿವೃದ್ಧಿಗೆ ಕಾರಣವಾಯಿತು ಎಂದು ಹೇಳಿದರು.
ಇಂದು, ಭಾರತ ವಿಶ್ವದ 5 ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದಾಗಿದ್ದು, ಮತ್ತು ಶೀಘ್ರದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
ದೇಶದ ಬೆಳವಣಿಗೆಯ ಪ್ರಯಾಣದಲ್ಲಿ ಎಲ್ಲಾ ವರ್ಗಗಳ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು, ಅವರಿಗೆ ಉಳಿತಾಯ, ಪಿಂಚಣಿ, ವಿಮೆ, ಕ್ರೆಡಿಟ್ ಮತ್ತು ಇತರ ಸೇವೆಗಳನ್ನು ಒದಗಿಸಲು ಈ ಯೋಜನೆಯಡಿಯಲ್ಲಿ 55 ಕೋಟಿ ಖಾತೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.8 ರಷ್ಟು ಬೆಳವಣಿಗೆ ಕಂಡಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದ್ದು, ಅಮೆರಿಕ ದೇಶದ ಮೇಲೆ ಭಾರೀ ಸುಂಕ ವಿಧಿಸುವ ಮೊದಲು ಇದು ಐದು ತ್ರೈಮಾಸಿಕಗಳಲ್ಲಿ ಅತಿ ಹೆಚ್ಚು ಎನ್ನಲಾಗಿದೆ.












