ಇಂದು ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಸೆಣಸಾಟ

ವಿಶ್ವಕಪ್‌ ಇತಿಹಾಸದಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸಿರುವ ಅಪರೂಪದ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಂದು. ಈವರೆಗಿನ 5 ಪಂದ್ಯಗಳಲ್ಲಿ ಅದು ಮೂರನ್ನು ಗೆದ್ದಿದೆ. ಭಾರತಕ್ಕೆ ಒಲಿದದ್ದು 2 ಗೆಲುವು ಮಾತ್ರ. ರವಿವಾರದ ಮುಖಾಮುಖಿಯ ಹಿನ್ನೆಲೆಯಲ್ಲಿ ಈ ಫ‌ಲಿತಾಂಶಗಳತ್ತ ಒಂದು ಇಣುಕುನೋಟ ಹಾಯಿಸಲಾಗಿದೆ.ಆದರೆ ಗೆದ್ದು ಗೆದ್ದು ಕೊನೆಯಲ್ಲಿ ವಿಚಿತ್ರ ರೀತಿಯಲ್ಲಿ ಬಿದ್ದು ಕೂಟದಿಂದ ನಿರ್ಗಮಿಸುವುದು ಹರಿಣಗಳ ಪಡೆಯ ಹಣೆಬರಹವೇ ಆಗಿರುವುದನ್ನು ಮರೆಯುವಂತಿಲ್ಲ. ಹೀಗಾಗಿ ಅದಕ್ಕೆ ಸೆಮಿಫೈನಲ್‌ ಹಂತವೇ ಅಂತಿಮ ಮೆಟ್ಟಿಲಾಗುತ್ತ ಬಂದಿರುವುದು ವಿಪರ್ಯಾಸ.“ಚೋಕರ್’ ಹಣೆಪಟ್ಟಿಯನ್ನು ಕಿತ್ತೆಸೆಯಲು ದಕ್ಷಿಣ ಆಫ್ರಿಕಾದಿಂದ ಸಾಧ್ಯವಾದೀತೇ ಎಂಬುದು ಈ ಸಲದ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಮುಖ್ಯ ಪ್ರಶ್ನೆ ಹಾಗೂ ಕುತೂಹಲ. 1992ರಲ್ಲಿ ವಿಶ್ವಕಪ್‌ಗೆ ಪ್ರವೇಶ ಪಡೆದಂ ದಿನಿಂದಲೂ ಅಮೋಘ ಪ್ರದರ್ಶನ ನೀಡುತ್ತ ಬಂದ ಹಿರಿಮೆಯೇನೋ ಸೌತ್‌ ಆಫ್ರಿಕಾ ಪಾಲಿಗಿದೆ.

ಈ ಸಲವೂ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸಿದೆ. ಇದಕ್ಕೂ ಮೊದಲು ರವಿವಾರ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ದೊಡ್ಡ ಹರ್ಡಲ್ಸ್‌ ಒಂದನ್ನು ದಾಟಬೇಕಿದೆ. ಟೆಂಬ ಬವುಮ ಪಡೆ ಆತಿಥೇಯ ಹಾಗೂ ಅಜೇಯ ಭಾರತದ ಸವಾಲನ್ನು ಎದುರಿಸಬೇಕಿದೆ. ರವಿವಾರ ಕೋಲ್ಕತಾದಲ್ಲಿ ಹ್ಯಾಟ್ರಿಕ್‌ ಗೆಲುವಿನ ಅವಕಾಶ ಭಾರತದ ಮುಂದೆ ತೆರೆದುಕೊಂಡಿದೆ.