ನಾಳೆ ಭಾರತ vs​ ನೇಪಾಳ ಪಂದ್ಯ, ಚಿನ್ನ ಗೆಲ್ಲುವತ್ತ IPL​ ಸ್ಟಾರ್​ಗಳ ಚಿತ್ತ: ಏಷ್ಯನ್​ ಗೇಮ್ಸ್​

ಹ್ಯಾಂಗ್‌ಝೌ (ಚೀನಾ): ಯಶಸ್ವಿ ಜೈಸ್ವಾಲ್ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಟೆಸ್ಟ್​ ಮತ್ತು ಟಿ20 ಪಂದ್ಯಗಳನ್ನಾಡಿದ್ದು, ಒಂದು ಶತಕ ಮತ್ತು ಎರಡು ಅರ್ಧಶತಕದಿಂದ ಒಟ್ಟಾರೆ 7 ಅಂತರರಾಷ್ಟ್ರೀಯ ಪಂದ್ಯಗಳಿಂದ 398 ರನ್ ಕಲೆಹಾಕಿದ್ದಾರೆ. ಐರ್ಲೆಂಡ್​ ವಿರುದ್ಧ ಎರಡು ಪಂದ್ಯಗಳನ್ನಾಡಿದ ರಿಂಕು ಸಿಂಗ್​ಗೆ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. 19ನೇ ಏಷ್ಯಾಡ್​ನಲ್ಲಿ ಭಾರತ ಕ್ರಿಕೆಟ್​ ತಂಡ ಭಾಗವಹಿಸುತ್ತಿದ್ದು, ಚೊಚ್ಚಲ ಪ್ರಯತ್ನದಲ್ಲೇ ಚಿನ್ನ ಗೆಲ್ಲುವ ಭರವಸೆ ಇದೆ. ಏಷ್ಯಾಡ್​ನಲ್ಲಿ ಅವರ ಬ್ಯಾಟ್​ನಿಂದ ರನ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಪ್ರೀಮಿಯರ್​​ ಲೀಗ್​ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಬಿಸಿಸಿಐ ವನಿತೆಯರ ಮತ್ತು ಪುರುಷರ ತಂಡವನ್ನು ಚೀನಾದ ಹ್ಯಾಂಗ್‌ಝೌಗೆ ಕಳುಹಿಸಿದೆ.

ವನಿತೆಯರ ತಂಡ ಇತ್ತೀಚೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ. ನಾಳೆಯಿಂದ ರುತುರಾಜ್ ಗಾಯಕ್ವಾಡ್​ ನಾಯಕತ್ವದ ಭಾರತ ತಂಡ ಏಷ್ಯಾಡ್​ ಕ್ವಾರ್ಟರ್‌ಫೈನಲ್‌ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ. ಏಕದಿನ ವಿಶ್ವಕಪ್​ ಮತ್ತು ಏಷ್ಯನ್​ ಗೇಮ್ಸ್​ ಒಂದೇ ಸಮಯದಲ್ಲಿ ನಡೆಯುತ್ತಿದೆ.

ಅಕ್ಟೋಬರ್​ 7ರಂದು ಫೈನಲ್: ಗೆದ್ದ ತಂಡಗಳ ನಡುವೆ ಸೆಮಿಫೈನಲ್​ ನಡೆಯಲಿದ್ದು, ಸೆಮಿಸ್​ನಲ್ಲಿ ಗೆಲ್ಲುವ ತಂಡ ಚಿನ್ನಕ್ಕಾಗಿ ಅಕ್ಟೋಬರ್​ 7ರಂದು ಫೈನಲ್​ನಲ್ಲಿ ಮುಖಾಮುಖಿ ಆಗಲಿವೆ. ಸೋತ ತಂಡಗಳು ಅದೇ ದಿನ ಕಂಚಿಗಾಗಿ ಮೈದಾನಕ್ಕಿಳಿಯಲಿವೆ.

ಏಷ್ಯನ್​ ಗೇಮ್ಸ್​, ಭಾರತ ತಂಡ ಹೀಗಿದೆ​: ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ದುಬೆ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಆಕಾಶ್ ದೀಪ್

ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್
ಪಂದ್ಯ ನಡೆಯುವ ಸ್ಥಳ, ನೇರಪ್ರಸಾರದ ವಿವರ: ನಾಳೆ ಬೆಳಗ್ಗೆ ಭಾರತೀಯ ಕಾಲಮಾನ 6:30ಕ್ಕೆ ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ಪಂದ್ಯ ಆರಂಭವಾಗಲಿದೆ. ಪಂದ್ಯದ ನೇರಪ್ರಸಾರ ಸೋನಿ ಸ್ಪೋರ್ಟ್ಸ್​​ ಮತ್ತು ಸೋನಿ ಲೈವ್‌ನಲ್ಲಿ ವೀಕ್ಷಿಸಬಹುದು.

ಏಷ್ಯನ್​ ಗೇಮ್ಸ್‌ನಲ್ಲಿ ಕ್ರಿಕೆಟ್​: ಏಷ್ಯನ್​ ಗೇಮ್ಸ್​ಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್​ ಫೈನಲ್‌ಗೆ​ ಅರ್ಹತೆ ಪಡೆದುಕೊಂಡಿವೆ. ನೇಪಾಳ, ಹಾಂ​ಕಾಂಗ್​ ಮತ್ತು ಮಲೇಷ್ಯಾ ತಂಡಗಳು ಅರ್ಹತಾ ಹಂತದ ಪಂದ್ಯಗಳನ್ನಾಡಿ ಕ್ವಾರ್ಟ​ರ್​ ಫೈನಲ್​ಗೆ ಪ್ರವೇಶ ಪಡೆದುಕೊಂಡಿವೆ. ಅಕ್ಟೋಬರ್​ 4ರಂದು ಶ್ರೀಲಂಕಾ vs ಅಫ್ಘಾನಿಸ್ತಾನ, ಬಾಂಗ್ಲಾದೇಶ vs ಮಲೇಷ್ಯಾ ನಡುವೆ ಪಂದ್ಯಗಳಿವೆ.

ಭಾರತದಿಂದ ಯುವ ತಂಡವನ್ನು ಆಯ್ಕೆ ಏಷ್ಯಾಡ್​ಗೆ ಕಳುಹಿಸಲಾಗಿದೆ. 2023ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಐಪಿಎಲ್‌) ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ದೊರೆತಿದೆ. ಜಿತೇಶ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್ ಮತ್ತು ಆಕಾಶ್‌ದೀಪ್ ಪಾದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಐಪಿಎಲ್​ನಲ್ಲಿ ಐದು ಸಿಕ್ಸ್​ ಬಾರಿಸಿದ ರಿಂಕು ಸಿಂಗ್​ ಐರ್ಲೆಂಡ್​ ವಿರುದ್ಧ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಮುಖೇಶ್ ಕುಮಾರ್ ಮತ್ತು ಯಶಸ್ವಿ ಜೈಸ್ವಾಲ್ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಪಾದಾರ್ಪಣೆ ಮಾಡಿದ್ದರು. ಹೀಗೆ ಹೆಚ್ಚು ಯುವ ಆಟಗಾರರೇ ತಂಡದಲ್ಲಿದ್ದಾರೆ.

ವಿಶ್ವಕಪ್​ಗೂ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರುತುರಾಜ್​ ಗಾಯಕ್ವಾಡ್​​ ಆರಂಭಿಕರಾಗಿ ಕಣಕ್ಕಿಳಿದು ಅರ್ಧಶತಕ ದಾಖಲಿಸಿದ್ದರು. ತಿಲಕ್​ ವರ್ಮಾ ವಿಂಡೀಸ್​ ಪ್ರವಾಸ ಮತ್ತು ಏಷ್ಯಾಕಪ್​ನಲ್ಲಿ ಭಾರತದ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಅರ್ಷ್‌ದೀಪ್ ಸಿಂಗ್, ಮುಖೇಶ್ ಕುಮಾರ್ ಬೌಲಿಂಗ್ ವಿಭಾಗವನ್ನು ನಿಭಾಯಿಸಲಿದ್ದಾರೆ.