ಬರ್ಮಿಂಗ್ಹ್ಯಾಮ್: ಇಲ್ಲಿನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಕಾಮನ್ವೆಲ್ತ್ ಗೇಮ್ಸ್ 2022 ಸೋಮವಾರ ರಾತ್ರಿ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿತು. 72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಂದ 5,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಿದ ಹನ್ನೊಂದು ದಿನಗಳ ಕ್ರೀಡಾ ಚಟುವಟಿಕೆಗಳ ನಂತರ ಆಟಗಳು ಅಧಿಕೃತವಾಗಿ ಮುಕ್ತಾಯಗೊಂಡವು.
ಸಮಾರೋಪ ಸಮಾರಂಭದಲ್ಲಿ ಬಾಕ್ಸರ್ ನಿಖತ್ ಝರೀನ್ ಮತ್ತು ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ರಾಷ್ಟ್ರಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಿದರು.
2026 ರಲ್ಲಿ ಕ್ರೀಡಾಕೂಟದ ಮುಂದಿನ ಆವೃತ್ತಿಯನ್ನು ಆಯೋಜಿಸಲಿರುವ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯಕ್ಕೆ ಹಸ್ತಾಂತರಿಸಲಾದ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ನ ಧ್ವಜವನ್ನು ಕೆಳಗಿಳಿಸುವ ಮೂಲಕ ಬರ್ಮಿಂಗ್ಹ್ಯಾಮ್ ಕ್ರೀಡಾಕೂಟಕ್ಕೆ ತೆರೆ ಎಳೆಯಲಾಯಿತು.
ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತವು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟು 61 ಪದಕಗಳೊಂದಿಗೆ ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಲಾನ್ ಬೌಲ್ಗಳು, ಜೂಡೋ ಮತ್ತು ಅಥ್ಲೆಟಿಕ್ಸ್ನಂತಹ ಕ್ರೀಡೆಗಳಲ್ಲಿ ಅನಿರೀಕ್ಷಿತ ಪದಕಗಳನ್ನು ಗೆದ್ದ ಭಾರತೀಯ ತಂಡವು ಟೂರ್ನಿಯಲ್ಲಿ ಶ್ಲಾಘನೀಯ ಪ್ರದರ್ಶನವನ್ನು ನೀಡಿತು. ಕುಸ್ತಿಯು ಆರು ಚಿನ್ನ ಸೇರಿದಂತೆ 12 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ವೇಟ್ಲಿಫ್ಟಿಂಗ್ 10 ಪದಕಗಳನ್ನು ಗಳಿಸಿದೆ. ಪುರುಷರ ಹಾಕಿ ತಂಡವು ಬೆಳ್ಳಿಯನ್ನು ಗೆದ್ದುಕೊಂಡಿತು.
ಕೊನೆದಿನ ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದಿತು. ಬ್ಯಾಡ್ಮಿಂಟನ್ನಲ್ಲಿ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಬ್ಯಾಡ್ಮಿಂಟನ್ನಲ್ಲಿ ಮೂರನೇ ಚಿನ್ನದ ಪದಕ ಗೆದ್ದುಕೊಂಡಿತು.
ಟೇಬಲ್ ಟೆನಿಸ್ನಲ್ಲಿ ಅಚಂತ ಶರತ್ ಕಮಲ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಗೆದ್ದು ತಮ್ಮ ಎರಡನೇ ಚಿನ್ನದ ಪದಕವನ್ನು ಪಡೆದರು. ಮತ್ತೊಂದೆಡೆ, ಜಿ ಸತ್ಯನ್ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಕಂಚಿನ ಪದಕ ಗೆದ್ದರು. ಪುರುಷರ ಹಾಕಿ ತಂಡ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 0-7 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಮಹಿಳಾ ಕ್ರಿಕೆಟ್ ತಂಡವೂ ಕೂಡಾ ಬೆಳ್ಳಿ ಗೆದ್ದು ಬೀಗಿತು.
 
								 
															





 
															 
															 
															











