ಯಕ್ಷಗಾನ ಕಲೆಯ ಅಂಚೆ ಚೀಟಿ ಬಿಡುಗಡೆ: ದೈವಾರಾಧನೆಯ ಅಂಚೆ ಚೀಟಿ ಬಿಡುಗಡೆಗೂ ಪ್ರಯತ್ನ

ಮಂಗಳೂರು: ಅಂಚೆ ಇಲಾಖೆಯು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಹಯೋಗದಲ್ಲಿ ಹೊರತಂದಿರುವ ಯಕ್ಷಗಾನದ (Yakshagana) ಅಂಚೆಚೀಟಿ ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಈ ಹಿಂದೆ ಉಳ್ಳಾಲದ ರಾಣಿ ಅಬ್ಬಕ್ಕ ಕುರಿತ ಅಂಚೆ ಚೀಟಿ ಬಿಡುಗಡೆಯಾಗಿತ್ತು. ಅದನ್ನು ಹೊರತುಪಡಿಸಿದರೆ ಕರಾವಳಿಯ ಸಂಸ್ಕೃತಿ ಹಾಗೂ ಜನಜೀವನ ಬಿಂಬಿಸುವ ಅಂಚೆ ಚೀಟಿಗಳು ವಿರಳ. ಯಕ್ಷಗಾನದ ಅಂಚೆ ಚೀಟಿ ಬಿಡುಗಡೆಗೊಳಿಸುವಂತೆ 2019ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಇಂತಹ ಪ್ರಸ್ತಾವಗಳನ್ನು ಪರಿಶೀಲಿಸಿ ಮಂಜೂರಾತಿ ಅಂಚೆ ಚೀಟಿ ಸಲಹಾ ಸಮಿತಿ ವರ್ಷಕ್ಕೊಮ್ಮೆ ಸಭೆ ನಡೆಸುತ್ತದೆ. ಐದು ವರ್ಷಗಳ ಪ್ರಯತ್ನದ ಫಲವಾಗಿ ಅಂಚೆ ಚೀಟಿಯಲ್ಲಿ ಯಕ್ಷಗಾನವನ್ನು ಕಾಣುವಂತಾಗಿದೆ. ತೆಂಕು ಹಾಗೂ ಬಡಗು ತಿಟ್ಟುಗಳ ಚಿತ್ರಗಳನ್ನು ಇದರಲ್ಲಿವೆ ಎಂದರು.

ರಾಜ್ಯದ ಕರಾವಳಿಯ ಸಂಸ್ಕೃತಿಯ ದ್ಯೋತಕವಾದ ದೈವಾರಾಧನೆಯ ಅಂಚೆ ಚೀಟಿ ಬಿಡುಗಡೆಗೂ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್‌.ರಾಜೇಂದ್ರ ಕುಮಾರ್, ಪಂಡಿತ್ ರಮಾಬಾಯಿ, ಡಾ.ಟಿ.ಎಂ.ಎ.ಪೈ, ಶಿವರಾಮ ಕಾರಂತ, ಸೇಂಟ್‌ ಅಲೋಷಿಯಸ್‌ ಚಾಪೆಲ್‌, ಕವಿ ಮುದ್ದಣ ಹಾಗೂ ರಾಣಿ ಅಬ್ಬಕ್ಕ ಅಂಚೆ ಚೀಟಿಗಳು ಸೇರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದ 10 ಅಂಚೆ ಚೀಟಿಗಳು ಇದುವರೆಗೆ ಬಿಡುಗಡೆಯಾಗಿವೆ. ಅಂಚೆ ಚೀಟಿಯಲ್ಲಿ ಸ್ಥಾನ ಪಡೆಯಲು ಯೋಗ್ಯರಾದ ಅನೇಕ ಮಹಾನೀಯರು ಈ ಪ್ರದೇಶದಲ್ಲಿದ್ದಾರೆ. ಇಲ್ಲಿನ ಅನೇಕ ವಿಚಾರಗಳು ಅಂಚೆ ಚೀಟಿಯಲ್ಲಿ ಬಿಂಬಿತವಾಗುವ ಅರ್ಹತೆ ಪಡೆದಿವೆ ಎಂದರು.

ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ ಡ್ಯಾಶ್ ಮಾತನಾಡಿ, ಮೊದಲ ದಿನದ ಲಕೋಟೆ ಹಾಗೂ ಬ್ರೋಷರ್‌ ಕೂಡಾ ಈ ಅಂಚೆ ಚೀಟಿಯ ಜೊತೆ ಬಿಡುಗಡೆಯಾಗುತ್ತಿದೆ ಎಂದರು.

ವಿದ್ವಾಂಸ ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನ ಕಲೆಯ ಕುರಿತ ಸರಣಿ ಅಂಚೆಚೀಟಿಗಳನ್ನು ಹೊರತರುವ ಅಗತ್ಯವಿದೆ. ದೊಡ್ಡ ಜನಸಮೂಹವನ್ನು ಆಕರ್ಷಿಸುವ ಪ್ರಯತ್ನದಲ್ಲಿ ಯಕ್ಷಗಾನ ಸಾಂಪ್ರದಾಯಿಕ ಸೊಗಡನ್ನು ಕಳೆದುಕೊಳ್ಳಬಾರದು. ಈ ಕಲೆಗೆ ಯುನೆಸ್ಕೊ ಮಾನ್ಯತೆ ದೊರಕಿಸುವತ್ತ ಜನಪ್ರತಿನಿಧಿಗಳು ಶ್ರಮವಹಿಸಬೇಕು ಎಂದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಅಂಚೆಚೀಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಈ ಕಲೆಗೆ ಮತ್ತಷ್ಟು ಉತ್ತೇಜನ ಸಿಕ್ಕಿದೆ. ಈ ಕಲೆಯನ್ನು ಭಾರತದಾದ್ಯಂತ ಪ್ರಚುರಪಡಿಸಲು ಇದು ನೆರವಾಗುತ್ತದೆ ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಎಂಆರ್‌ಪಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಉಪಸ್ಥಿತರಿದ್ದರು.

ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ರಚಿಸಿದ ‘ಲೋಕಾಭಿರಾಮ’ ಯಕ್ಷಗಾನವನ್ನು ಪಟ್ಲ ಸತೀಶ ಶೆಟ್ಟಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.