ನವದೆಹಲಿ: ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ಭಾರತವು ಇದೇ ಮೊದಲ ಬಾರಿಗೆ ಕಚ್ಚಾ ತೈಲದ ಪಾವತಿಯನ್ನು ಭಾರತೀಯ ರೂಪಾಯಿಗಳ ಮೂಲಕ ಯುಎಇಗೆ ಪಾವತಿಸಿದ್ದು, ಡಾಲರ್ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಪಣ ತೊಟ್ಟಿದೆ. ಈ ಐತಿಹಾಸಿಕ ಬೆಳವಣಿಗೆಯು ಸ್ಥಳೀಯ ರೂಪಾಯಿಯನ್ನು ಜಾಗತಿಕ ಮಟ್ಟಕ್ಕೇರಿಸಲು ಸಹಾಯ ಮಾಡುತ್ತಿದೆ.
ರಾಷ್ಟ್ರವು ತನ್ನ ತೈಲ ಅಗತ್ಯಗಳನ್ನು ಪೂರೈಸಲು ಆಮದುಗಳ ಮೇಲೆ 85% ಕ್ಕಿಂತ ಹೆಚ್ಚು ಅವಲಂಬಿತವಾಗಿದೆ. ಲಭ್ಯವಿರುವ ಅಗ್ಗದ ಮೂಲದಿಂದ ಖರೀದಿಸುವುದು, ಪೂರೈಕೆಯ ಮೂಲಗಳನ್ನು ವೈವಿಧ್ಯಗೊಳಿಸುವುದು ಮತ್ತು ರಷ್ಯಾದ ತೈಲ ಖರೀದಿ ಸಂದರ್ಭದಲ್ಲಿ ಬೆಲೆ ಮಿತಿಯಂತಹ ಯಾವುದೇ ಅಂತರರಾಷ್ಟ್ರೀಯ ಬಾಧ್ಯತೆಯನ್ನು ಉಲ್ಲಂಘಿಸದಿರುವ ಮೂರು ಅಂಶಗಳ ಕಾರ್ಯತಂತ್ರವನ್ನು ಭಾರತ ಅನುಸರಿಸುತ್ತಿದೆ.
ಭಾರತದ ಈ ತಂತ್ರವು ಶತಕೋಟಿ ಡಾಲರ್‌ಗಳನ್ನು ಉಳಿಸಲು ಸಹಾಯ ಮಾಡಲಿದೆ. ಉಕ್ರೇನ್ ಯುದ್ಧ ಸಮಯದಲ್ಲಿ ರಷ್ಯಾದಿಂದ ತೈಲದ ಆಮದುಗಳನ್ನು ಹೆಚ್ಚಿಸುವುದರ ಮೂಲಕ, ಡಾಲರ್ ಪರಿವರ್ತನೆಗಳನ್ನು ತೊಡೆದುಹಾಕಲು ವಹಿವಾಟು ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಡಾಲರ್‌ಗಳ ಬದಲಿಗೆ ರೂಪಾಯಿಗಳಲ್ಲಿ ವ್ಯಾಪಾರವನ್ನು ಇತ್ಯರ್ಥಪಡಿಸುವ ಮೂಲಕ ಭಾರತವು ತನ್ನ ಬೊಕ್ಕಸವನ್ನು ಸುರಕ್ಷಿತಗೊಳಿಸುವತ್ತ ಕಾರ್ಯಪ್ರವೃತ್ತವಾಗಿದೆ.
ಜುಲೈನಲ್ಲಿ ಭಾರತವು ಯುಎಇಯೊಂದಿಗೆ ರೂಪಾಯಿ ಪಾವತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯಿಂದ ಒಂದು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಲು ರೂಪಾಯಿ ಪಾವತಿಗಳನ್ನು ಮಾಡಿದೆ. ರಷ್ಯಾದ ಕೆಲವು ತೈಲ ಆಮದು ಕೂಡ ರೂಪಾಯಿಯಲ್ಲಿ ಇತ್ಯರ್ಥವಾಗಿದೆ. ರೂಪಾಯಿ ಬಲವರ್ಧನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷದಿಂದ 18 ದೇಶಗಳೊಂದಿಗೆ ಒಂದು ಡಜನ್‌ಗಿಂತಲೂ ಹೆಚ್ಚು ಬ್ಯಾಂಕ್‌ಗಳಿಗೆ ರೂಪಾಯಿ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿದೆ.