ಭಾರತೀಯ ಮಹಿಳೆಯರ ವಿರುದ್ದ ದಿನಕ್ಕೆ ಸರಾಸರಿ 86 ಅತ್ಯಾಚಾರ, ಗಂಟೆಗೆ 49 ಅಪರಾಧ ಪ್ರಕರಣ: ಎನ್‌ಸಿಆರ್‌ಬಿ ವರದಿ

ನವದೆಹಲಿ: ಇತ್ತೀಚಿನ ಸರ್ಕಾರಿ ವರದಿಯ ಪ್ರಕಾರ 2021 ರಲ್ಲಿ ಭಾರತದಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ವಿರುದ್ದ ದಿನಕ್ಕೆ ಸರಾಸರಿ 86 ಅತ್ಯಾಚಾರ ಪ್ರಕರಣ ಹಾಗೂ ಗಂಟೆಗೆ ಸುಮಾರು 49 ಅಪರಾಧ ಪ್ರಕರಣಗಳು ನಡೆಯುತ್ತವೆ. 2020 ರಲ್ಲಿ ಮಹಿಳೆಯರ ಅತ್ಯಾಚಾರ ಪ್ರಕರಣಗಳ ಸಂಖ್ಯೆ 28,046 ಆಗಿದ್ದರೆ, 2019 ರಲ್ಲಿ ಇದು 32,033 ಆಗಿತ್ತು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿಯ ‘ಕ್ರೈಮ್ ಇನ್ ಇಂಡಿಯಾ 2021’ ವರದಿ ತೋರಿಸಿದೆ. ಎನ್‌ಸಿಆರ್‌ಬಿ ಯು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ರಾಜ್ಯಗಳ ಪೈಕಿ, ರಾಜಸ್ಥಾನ (6,337) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ (2,947), ಮಹಾರಾಷ್ಟ್ರ (2,496) ಮತ್ತು ಉತ್ತರ ಪ್ರದೇಶ (2,845), ದೆಹಲಿ (1,250) ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದೆ ಎಂದು ವರದಿ ಸೂಚಿಸಿದೆ. ಅತ್ಯಾಚಾರದ ಅಪರಾಧದ ಪ್ರಮಾಣ (ಪ್ರತಿ ಲಕ್ಷ ಜನಸಂಖ್ಯೆಗೆ) ರಾಜಸ್ಥಾನ (16.4) ಚಂಡೀಗಢ (13.3), ದೆಹಲಿ (12.9), ಹರಿಯಾಣ (12.3) ಮತ್ತು ಅರುಣಾಚಲ ಪ್ರದೇಶ (11.1).
ಎನ್‌ಸಿಆರ್‌ಬಿ ಪ್ರಕಾರ ಅಖಿಲ ಭಾರತ ಸರಾಸರಿ ದರವು 4.8 ರಷ್ಟಿದೆ. 2021 ರಲ್ಲಿ ದೇಶದಾದ್ಯಂತ ‘ಮಹಿಳೆಯರ ವಿರುದ್ಧದ ಅಪರಾಧಗಳ’ ಒಟ್ಟಾರೆ 4,28,278 ಪ್ರಕರಣಗಳನ್ನು ದಾಖಲಿಸಲಾಗಿದೆ, ಅಪರಾಧದ ದರ (ಪ್ರತಿ ಒಂದು ಲಕ್ಷ ಜನಸಂಖ್ಯೆಗೆ) 64.5 ರಷ್ಟಿದೆ. ಅಂತಹ ಅಪರಾಧಗಳಲ್ಲಿ ಚಾರ್ಜ್ ಶೀಟಿಂಗ್ ದರವು 77.1 ಆಗಿತ್ತು ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ.

ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಅತ್ಯಾಚಾರ, ಅತ್ಯಾಚಾರ ಮತ್ತು ಕೊಲೆ, ವರದಕ್ಷಿಣೆ ಕಿರುಕುಳ, ಆಸಿಡ್ ದಾಳಿಗಳು, ಆತ್ಮಹತ್ಯಾ ಪ್ರಚೋದನೆ, ಅಪಹರಣ, ಬಲವಂತದ ಮದುವೆ, ಮಾನವ ಕಳ್ಳಸಾಗಣೆ, ಆನ್‌ಲೈನ್ ಕಿರುಕುಳ ಮುಂತಾದ ಅಪರಾಧಗಳು ಸೇರಿವೆ.

2021 ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳ ಗರಿಷ್ಠ ಪ್ರಕರಣಗಳು ಉತ್ತರ ಪ್ರದೇಶದಲ್ಲಿ (56,083) ದಾಖಲಾಗಿವೆ, ನಂತರ ರಾಜಸ್ಥಾನ (40,738), ಮಹಾರಾಷ್ಟ್ರ (39,526), ​​ಪಶ್ಚಿಮ ಬಂಗಾಳ (35,884) ಮತ್ತು ಒಡಿಶಾ (31,352 ಎಂದು) ಎನ್‌ಸಿಆರ್‌ಬಿ ತೋರಿಸಿದೆ.

ಆದಾಗ್ಯೂ, ಮಹಿಳೆಯರ ವಿರುದ್ಧದ ಅಪರಾಧಗಳ ದರಗಳ ಪಟ್ಟಿಯಲ್ಲಿ ಅಸ್ಸಾಂ (168.3) ಅಗ್ರಸ್ಥಾನದಲ್ಲಿದೆ, ನಂತರ ದೆಹಲಿ (147), ಒಡಿಶಾ (137), ಹರಿಯಾಣ (119.7) ಮತ್ತು ತೆಲಂಗಾಣ (111.2) ರಾಜ್ಯಗಳು ಇವೆ.

ಮೂಲ: ಝೀನ್ಯೂಸ್