ನವದೆಹಲಿ: ಭಾರತವು ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ರಫ್ತುದಾರನಾಗಿ ಹೊರಹೊಮ್ಮಿದೆ. ಸಕ್ಕರೆ ಋತು 2021-22 ರಲ್ಲಿ, ದೇಶದಲ್ಲಿ ಐದು ಸಾವಿರ ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಕಬ್ಬು ಉತ್ಪಾದನೆಯಾಗಿದೆ. ಈ ಪೈಕಿ 35 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗಿದ್ದು, 359 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಕಾರ್ಖಾನೆಗಳು ಉತ್ಪಾದಿಸಿವೆ.
ಈ ಋತುವು ಭಾರತೀಯ ಸಕ್ಕರೆ ವಲಯಕ್ಕೆ ಪರ್ವಕಾಲವೆಂದು ಸಾಬೀತಾಗಿದೆ. 109 ಲಕ್ಷ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಿನ ಸಕ್ಕರೆ ರಫ್ತಾಗಿ ದಾಖಲೆ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಬೆಂಬಲ ಬೆಲೆಗಳು ಮತ್ತು ಕೇಂದ್ರ ಸರ್ಕಾರದ ನೀತಿಗಳು, ಭಾರತೀಯ ಸಕ್ಕರೆ ಉದ್ಯಮದ ಈ ಸಾಧನೆಗೆ ಕಾರಣವಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವ ಹೇಳಿದೆ.
ಈ ರಫ್ತುಗಳು ಸುಮಾರು 40 ಸಾವಿರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಗಳಿಸಿದೆ. ಸಕ್ಕರೆ ಉದ್ಯಮದ ಯಶಸ್ಸಿನ ಕಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಏಕಕಾಲಿಕ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ಸಚಿವಾಲಯ ತಿಳಿಸಿದೆ.