ಭೂಕಂಪ ಹಿನ್ನೆಲೆ: ಅಫ್ಘಾನಿಸ್ತಾನದ ನಾಗರಿಕರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದ ಭಾರತ

ನವದೆಹಲಿ: ಸುಮಾರು 1000 ಕ್ಕೂ ಹೆಚ್ಚು ನಾಗರಿಕರ ಪ್ರಾಣ ಕಿತ್ತುಕೊಂಡ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಜನರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ನೆರವನ್ನು ಭಾರತವು ರವಾನಿಸಿದೆ. ಪರಿಹಾರ ನೆರವು ಕುಟುಂಬ ರಿಡ್ಜ್ ಟೆಂಟ್‌ಗಳು, ಮಲಗುವ ಚೀಲಗಳು, ಹೊದಿಕೆಗಳು ಮತ್ತು ಮಲಗುವ ಮ್ಯಾಟ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದೆ.

Image credit: MEA/Twitter

ಪರಿಹಾರ ಸರಕನ್ನು ಕಾಬೂಲ್‌ನಲ್ಲಿರುವ ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ ಮತ್ತು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಲಾಗುವುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಭಾರತವು ಶತಮಾನಗಳಷ್ಟು ಹಳೆಯ ಬಾಂಧವ್ಯವನ್ನು ಹೊಂದಿರುವ ಅಫ್ಘಾನಿಸ್ತಾನದ ಜನರೊಂದಿಗೆ ಎಂದಿನಂತೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ಅಫ್ಘನ್ ಜನರಿಗೆ ತಕ್ಷಣದ ಪರಿಹಾರ ನೆರವು ನೀಡಲು ದೃಢವಾಗಿ ಬದ್ಧವಾಗಿದೆ ಎಂದು ಹೇಳಿದೆ.

ಅಫ್ಘಾನಿಸ್ತಾನದ ಜನರಿಗಾಗಿ ಭಾರತದ ಎರಡನೇ ಭೂಕಂಪ ಪರಿಹಾರ ನೆರವು ಕಾಬೂಲ್ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.