ಮುಂಬೈ: ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಡುವೆ ಟಿ20 ಪಂದ್ಯ ನಡೆದಿದ್ದು, ಇದು ಅತ್ಯುತ್ತಮ ಟಿ20 ಪಂದ್ಯ ಎಂದು ಬಣ್ಣಿಸಲಾಗುತ್ತಿದೆ. ಐದು ಪಂದ್ಯಗಳ ಸರಣಿಯ ಎರಡನೇ ಮಹಿಳಾ ಟಿ20 ಪಂದ್ಯದಲ್ಲಿ 30,000 ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಈ ಆಟವು ಟೈನಲ್ಲಿ ಕೊನೆಗೊಂಡಿತ್ತು. ಇದಾದ ಬಳಿಕ ಸೂಪರ್ ಓವರ್ ಎಸೆಯಲಾಯಿತು. ಟೀಮ್ ಇಂಡಿಯಾದ ಮಹಿಳಾ ಘಟಕವು ಮೊದಲ ಬಾರಿಗೆ ಸೂಪರ್ ಓವರ್ ಆಡುತ್ತಿತ್ತು ಮತ್ತು ಇಲ್ಲಿ ತಂಡವು ಅತ್ಯದ್ಭುತ ಪ್ರದರ್ಶನವನ್ನು ನೀಡಿ ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ.
ಬ್ಯಾಟ್ ಹಿಡಿದು ಕಣಕ್ಕಿಳಿದ ಆಸ್ಟ್ರೇಲಿಯಾದ ಆಟಗಾರ್ತಿಯರು ಆರಂಭದಿಂದಲೇ ಭಾರತೀಯ ಬೌಲರ್ ಗಳನ್ನು ದಂಡಿಸುತ್ತಲೆ ಬಂದರು. ಭಾರತೀಯ ಬೌಲರ್ ಗಳು ವಿಕೆಟ್ ಕೀಳಲು ಪರದಾಡುತ್ತಿದ್ದರು. ಪಂದ್ಯಾಂತ್ಯಕ್ಕೆ ಆಸ್ಟ್ರೇಲಿಯಾ 20 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಬೆತ್ ಮೂನಿ 54 ಎಸೆತಗಳಲ್ಲಿ 82 ರನ್ ಗಳಿಸಿ ಹಾಗೂ ಮೆಕ್ಗ್ರಾತ್ 51 ಎಸೆತಗಳಲ್ಲಿ 70 ರನ್ ಗಳಿಸಿ ಇಬ್ಬರೂ 99 ಎಸೆತಗಳಲ್ಲಿ 158 ರನ್ಗಳ ಅಜೇಯ ಜೊತೆಯಾಟ ನಡೆಸಿದರು.
Cricket: India defeat Australia in a thrilling Super Over in the second Women’s T20 match in five match series.
Smriti Mandhana (79 in 49 balls) bags the Player of the Match award#INDvAUS#SmritiMandhana pic.twitter.com/0ivxWptnT6
— All India Radio News (@airnewsalerts) December 11, 2022
188 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕಿಂತಲೂ ಅಬ್ಬರದ ಆಟ ಆರಂಭಿಸಿತು. ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಜೋಡಿ 9 ಓವರ್ಗಳಲ್ಲಿ 76 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಶೆಫಾಲಿ ವರ್ಮಾ 23 ಎಸೆತಗಳಲ್ಲಿ 34 ರನ್ ಗಳಿಸಿದರೆ ಇನ್ನೊಂದು ತುದಿಯಲ್ಲಿ, ಸ್ಮೃತಿ ಮಂಧಾನ ಮಾಸ್ಟರ್ಕ್ಲಾಸ್ ಆಟವನ್ನು ಪ್ರಸ್ತುತಪಡಿಸಿದರು. ಆಸ್ಟ್ರೇಲಿಯಾ ವಿರುದ್ಧ ಸ್ಮೃತಿ ಮಂಧಾನ ಅವರ 79 ರನ್ಗಳ ಇನ್ನಿಂಗ್ಸ್ ಬಹುಶಃ ಟಿ20 ನಲ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ.
ಸ್ಮೃತಿ ಮಂಧಾನ 49 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಂತೆ 79 ರನ್ ಗಳಿಸಿದರು. ಇನಿಂಗ್ಸ್ ನ 17ನೇ ಓವರ್ ನಲ್ಲಿ ವೇಗವಾಗಿ ರನ್ ಗಳಿಸುವ ಭರದಲ್ಲಿ ಅವರು ಔಟಾದಾಗ ಇನ್ನೇನು ಪಂದ್ಯ ಟೀಂ ಇಂಡಿಯಾ ಕೈ ತಪ್ಪಿ ಹೋಯಿತೆಂದೆ ಭಾವಿಸಲಾಗಿತ್ತು. ಆದರೆ ಕೊನೆಯಲ್ಲಿ ರಿಚಾ ಘೋಷ್ 13 ಎಸೆತಗಳಲ್ಲಿ 3 ಸಿಕ್ಸರ್ ಒಳಗೊಂಡಂತೆ 26 ರನ್ ಗಳಿಸಿ ಪಂದ್ಯಕ್ಕೆ ತಿರುವು ನೀಡಿದರು. ಕೊನೆಯ ಓವರ್ನಲ್ಲಿ ಟೀಂ ಇಂಡಿಯಾಗೆ 14 ರನ್ ಬೇಕಿತ್ತು. ಕೊನೆಯ ಎಸೆತದವರೆಗೂ ಕಾದಾಡಿದ ತಂಡದ ಬ್ಯಾಟರ್ ದೇವಿಕಾ ವೈದ್ಯ ಒಂದು ಬೌಂಡರಿ ಹೊಡೆದು ಪಂದ್ಯವನ್ನು ಟೈ ಮಾಡಿದರು. ಇದರೊಂದಿಗೆ ಟೀಂ ಇಂಡಿಯಾದ ಚೊಚ್ಚಲ ಸೂಪರ್ ಓವರ್ ಆಡಲು ವೇದಿಕೆ ಸಜ್ಜಾಯಿತು.
ಸೂಪರ್ ಓವರ್ ನಲ್ಲಿ ರಿಚಾ, ಹರ್ಮನ್ ಪ್ರೀತಿ ಮತ್ತು ಸ್ಮೃತಿ ಒಟ್ಟು 20 ರನ್ ಗಳಿಸಿದರು. ಆಸ್ಟ್ರೇಲಿಯಾ ಗೆಲುವಿಗೆ 21 ರನ್ಗಳ ಅಗತ್ಯವಿತ್ತು, ಆದರೆ ಭಾರತದ ರೇಣುಕಾ ಸಿಂಗ್ ಅವರ ಅದ್ಭುತ ಬೌಲಿಂಗ್ ಮುಂದೆ ಆಸ್ಟ್ರೇಲಿಯಾ 16 ರನ್ ಗಳಿಸಲಷ್ಟೇ ಶಕ್ತವಾಗಿ ಟಿ20 ಪಂದ್ಯದಲ್ಲಿ ಭಾರತದೆದುರು ಸೋಲೊಪ್ಪಿಕೊಂಡಿತು.
ಭಾರತದ ಮಹಿಳಾ ಕ್ರಿಕೆಟ್ ತಂಡದ ಈ ಅದ್ಭುತ ಗೆಲುವಿಗೆ ಕ್ರಿಕೆಟ್ ದಿಗ್ಗಜರು ಮತ್ತು ಕ್ರಿಕೆಟ್ ಪ್ರೇಮಿಗಳು ಅಭಿನಂದನೆಗಳ ಮಹಾಪೂರವನ್ನು ಹರಿಸುತ್ತಿದ್ದಾರೆ.












