ಟೊರೊಂಟೊದಲ್ಲಿ ಇಂಡಿಯಾ ಬಜಾರ್ ಉತ್ಸವ

ಟೊರೊಂಟೊ (ಕೆನಡಾ) :ಗೆರಾರ್ಡ್ ಇಂಡಿಯಾ ಬಜಾರ್, ಇದು ಉತ್ತರ ಅಮೆರಿಕಾದಲ್ಲಿನ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಭಾರತೀಯ ಮಾರುಕಟ್ಟೆಯಾಗಿದೆ. ಇದರ 21 ನೇ ವಾರ್ಷಿಕೋತ್ಸವ ಹಬ್ಬದಂದು 3 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಇಲ್ಲಿನ ಗೆರಾರ್ಡ್ ಇಂಡಿಯಾ ಬಜಾರ್‌ನಲ್ಲಿ ನಡೆದ ಉತ್ತರ ಅಮೆರಿಕದ ಅತಿದೊಡ್ಡ ಭಾರತೀಯ ಉತ್ಸವದಲ್ಲಿ ಟೊರೊಂಟೊ ಮೇಯರ್ ಒಲಿವಿಯಾ ಚೌ ಅವರು ಭಾಂಗ್ರಾ ಮತ್ತು ಬಾಲಿವುಡ್ ಹಾಡುಗಳಿಗೆ ಸ್ಟೆಪ್ಸ್​ ಹಾಕಿದರು.ಟೊರೊಂಟೊದಲ್ಲಿನ ಅತಿ ಹಳೆಯ ಭಾರತೀಯ ಮಾರುಕಟ್ಟೆಯಾಗಿರುವ ಗೆರಾರ್ಡ್ ಇಂಡಿಯಾ ಬಜಾರ್‌ನಲ್ಲಿ ಎರಡು ದಿನಗಳ ಭಾರತೀಯ ಉತ್ಸವ ನಡೆಯುತ್ತಿದೆ.

ಎರಡು ದಿನಗಳ ಆಹಾರ, ಬಾಲಿವುಡ್ ಸಂಗೀತ, ನೃತ್ಯ ಮತ್ತು ವಿನೋದದ ಕಾರ್ಯಕ್ರಮಕ್ಕೆ ಟೊರೊಂಟೊ ಮೇಯರ್ ಚಾಲನೆ ನೀಡಿದರು. ಕೆನಡಾದ ಅತ್ಯಂತ ವೈವಿಧ್ಯಮಯ ನಗರವಾದ ಟೊರೊಂಟೊದಲ್ಲಿ ನಡೆದ ಭಾರತೀಯ ಉತ್ಸವದಲ್ಲಿ ಭಾರತೀಯರು, ಪಾಕಿಸ್ತಾನಿಗಳು, ಬಿಳಿಯರು, ಕರಿಯರು ಮತ್ತು ವಿವಿಧ ಜನಾಂಗೀಯ ಜನರು ಭಾಗವಹಿಸಿದ್ದರು.

ಗೆರಾರ್ಡ್ ಸ್ಟ್ರೀಟ್‌ನಲ್ಲಿ ಏಳು ಬ್ಲಾಕ್‌ಗಳವರೆಗೆ ವ್ಯಾಪಿಸಿರುವ ಇಂಡಿಯಾ ಬಜಾರ್ ಮೋಜು ಮಸ್ತಿ ಮಾಡುವವರು, ಆಹಾರ ಮತ್ತು ಸಂಗೀತ ಪ್ರಿಯರಿಂದ ತುಂಬಿ ತುಳುಕುತ್ತಿತ್ತು. ವೇದಿಕೆಗಳಲ್ಲಿ ಬಾಲಿವುಡ್ ಸಂಗೀತವು ಧ್ವನಿವರ್ಧಕಗಳಿಂದ ಮೊಳಗುತ್ತಿದ್ದಂತೆಯೇ ಜನ ಹುಚ್ಚೆದ್ದು ಕುಣಿದರು. ಭಾರತದ ಅತ್ಯಂತ ಮೆಚ್ಚಿನ ಕ್ರೀಡೆಯಾದ ಕ್ರಿಕೆಟ್​ ಅನ್ನು ಕೆನಡಿಯನ್ನರಿಗೆ ಪರಿಚಯಿಸಲು ಸಂಘಟಕರು ಈ ವರ್ಷ `ಕ್ರಿಕೆಟ್ ಗಲ್ಲಿ’ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಭಾರತೀಯರಲ್ಲದ ಶೇಕಡಾ 40 ಪ್ರತಿಶತಕ್ಕಿಂತಲೂ ಹೆಚ್ಚು ಜನ ಸೇರಿದಂತೆ 3 ಲಕ್ಷಕ್ಕೂ ಹೆಚ್ಚು ಜನರು ಈ ವರ್ಷ ಉತ್ಸವದಲ್ಲಿ ಪಾಲ್ಗೊಂಡರು. ನಮ್ಮ ಸಂಸ್ಕೃತಿ, ಆಹಾರ ಮತ್ತು ಕ್ರೀಡೆಯನ್ನು ನಮ್ಮ ಮುಂದಿನ ಪೀಳಿಗೆಗೆ ಮತ್ತು ಮುಖ್ಯವಾಹಿನಿಗೆ ಪರಿಚಯಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಗೆರಾರ್ಡ್ ಇಂಡಿಯಾ ಬಜಾರ್ ಅಧ್ಯಕ್ಷ ಚಂದ್ ಕಪೂರ್ ಹೇಳಿದರು. ಎರಡು ದಿನಗಳ ಉತ್ಸವದಲ್ಲಿ ವಿವಿಧ ಜನಾಂಗೀಯ ಹಿನ್ನೆಲೆಯ 300 ಕ್ಕೂ ಹೆಚ್ಚು ಕಲಾವಿದರು ಪ್ರದರ್ಶನ ನೀಡಿದರು.

1970 ರ ದಶಕದ ಆರಂಭದಲ್ಲಿ, 1969 ರಲ್ಲಿ ನಿರ್ಮಿಸಲಾದ ಪೇಪ್ ಅವೆನ್ಯೂ ಸಿಖ್ ದೇವಾಲಯ ಎಂದು ಕರೆಯಲ್ಪಡುವ ಪೂರ್ವ ಕೆನಡಾದ ಮೊದಲ ಗುರುದ್ವಾರದ ಬಳಿ ಗೆರಾರ್ಡ್ ಇಂಡಿಯಾ ಬಜಾರ್ ಆರಂಭವಾಗಿತ್ತು. ಬಜಾರ್ ಒಂದು ಕಾಲದಲ್ಲಿ ಉತ್ತರ ಅಮೇರಿಕಾದಲ್ಲಿ ಭಾರತೀಯ ದಿನಸಿ ವಸ್ತುಗಳನ್ನು ಖರೀದಿಸುವ ಏಕೈಕ ಸ್ಥಳವಾಗಿತ್ತು.
ನಾವು ಇಷ್ಟು ವೈವಿಧ್ಯತೆಯ ಪ್ರದರ್ಶನವನ್ನು ಈ ಹಿಂದೆ ಎಂದೂ ನೋಡಿರಲಿಲ್ಲ. ಎಲ್ಲರೂ ಬಾಲಿವುಡ್‌ನತ್ತ ಆಕರ್ಷಿತರಾಗಿರುವಂತೆ ತೋರುತ್ತಿದೆ ಎಂದು ಗೆರಾರ್ಡ್ ಇಂಡಿಯಾ ಬಜಾರ್‌ನ ಕಾರ್ಯನಿರ್ವಾಹಕ ನಿರ್ದೇಶಕ ತಸ್ನೀಮ್ ಬಂದೂಕವಾಲಾ ಹೇಳಿದ್ದಾರೆ. ಎರಡು ದಿನಗಳ ಮೋಜು ಮಸ್ತಿಗೆ ದಾರಿ ಮಾಡಿಕೊಡಲು ಟೊರೊಂಟೊ ಅಧಿಕಾರಿಗಳು ಬೀದಿಗಳಲ್ಲಿ ಕಾರುಗಳ ಓಡಾಟವನ್ನು ನಿಲ್ಲಿಸಿದ್ದರಿಂದ ಬಜಾರ್‌ನಲ್ಲಿ ಹರಡಿರುವ ನೂರಾರು ಅಂಗಡಿಗಳು ಭರ್ಜರಿ ವ್ಯವಹಾರ ಮಾಡಿವೆ. ನಮ್ಮ ಅನೇಕ ರೆಸ್ಟೋರೆಂಟ್‌ಗಳು ಹಬ್ಬಕ್ಕಾಗಿ ಮಾತ್ರ ಕೆಲವು ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತವೆ ಎಂದು ಬಂದೂಕವಾಲಾ ಹೇಳಿದರು.