ಐಫೆಲ್ ಟವರ್ ನಿಂದ ಭಾರತೀಯ ಯುಪಿಐ ಬಳಸಿ ರೂಪಾಯಿಗಳಲ್ಲಿ ಹಣ ಪಾವತಿಸಿ: ಪ್ರಧಾನಿ ಮೋದಿ

ಪ್ಯಾರಿಸ್: ಭಾರತದ ಅತ್ಯಂತ ಯಶಸ್ವಿ ಪಾವತಿ ವ್ಯವಸ್ಥೆ ಯುಪಿಐ ಅನ್ನು ಫ್ರಾನ್ಸ್‌ನಲ್ಲಿಯೂ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಹೇಳಿದರು.

“ಭಾರತ ಮತ್ತು ಫ್ರಾನ್ಸ್ ದೆಶಗಳು ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಒಪ್ಪಿಕೊಂಡಿವೆ. ಮುಂಬರುವ ದಿನಗಳಲ್ಲಿ ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗುತ್ತದೆ, ಅಂದರೆ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿಸಲು ಸಾಧ್ಯವಾಗುತ್ತದೆ” ಎಂದು ಏಕೀಕೃತ ಪಾವತಿ ವ್ಯವಸ್ಥೆ(ಯುಪಿಐ)ಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.

ತಾನು ಈ ವ್ಯವಸ್ಥೆಗೆ ಅಂಕಿತವನ್ನು ಹಾಕಿ ಹೋಗುವುದಾಗಿಯೂ ಮುಂಬರುವ ದಿನಗಳಲ್ಲಿ ಇದನ್ನು ಯಶಸ್ವಿಯಾಗಿಸುವ ಜವಾಬ್ದಾರಿ ಜನರ ಮೇಲಿರುವುದಾಗಿಯೂ ಅವರು ಹೇಳಿದರು.

ಫ್ರಾನ್ಸ್‌ನಲ್ಲಿ ಯುಪಿಐ ಪಾವತಿಗಳನ್ನು ಅನುಮತಿಸುವುದರಿಂದ ಭಾರತೀಯರು ಖರ್ಚು ಮಾಡುವ ರೀತಿಯಲ್ಲಿ ದೊಡ್ಡ ಸಾಧ್ಯತೆಗಳನ್ನು ತೆರೆಯುತ್ತದೆ. ತೊಡಕಿನ ವಿದೇಶೀ ವಿನಿಮಯ ಕಾರ್ಡ್‌ಗಳ ಜಂಜಾಟವಿಲ್ಲದೆ ಹಾಗೂ ನಗದು ಹಣವನ್ನು ಕೊಂಡೊಯ್ಯುವ ಅವಶ್ಯಕತೆ ಇಲ್ಲದೆ ಕೇವಲ ಮೊಬೈಲ್ ಫೋನ್ ನಲ್ಲಿರುವ ಯುಪಿಐ ಮೂಲಕ ಭಾರತೀಯ ರೂಪಾಯಿಗಳಲ್ಲಿ ಪಾವತಿಗಳನ್ನು ಮಾಡಿ ಪ್ರವಾಸವನ್ನು ಆನಂದಿಸಬಹುದಾಗಿದೆ.